ಪ್ರಾದೇಶಿಕ ಪಕ್ಷಗಳಿಂದ ಬಲಿಷ್ಠಗೊಳ್ಳುತ್ತಿರುವ ಪ್ರಬಲ ಜಾತಿಗಳು

Prasthutha|

ಕಳೆದ ನಾಲ್ಕು ದಶಕಗಳ ಭಾರತದ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯ ಹಾಗು ನಿರ್ಣಯಾತ್ಮಕ. ಯಾವ ರಾಷ್ಟ್ರೀಯ ಪಕ್ಷವೂ ಪೂರ್ಣ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಾರವು ಎನ್ನುವಂತಹ ರಾಜಕೀಯ ವಾತಾವರಣ ದೇಶದ ಎಲ್ಲಾ ರಾಜ್ಯಗಳಲ್ಲಿ ಸೃಷ್ಟಿಯಾಗಿದೆ. ಬಹುಪಕ್ಷಿಯ ರಾಜಕೀಯ ವ್ಯವಸ್ಥೆ ಜಾರಿಯಲ್ಲಿರುವ ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನೂರಾರು ಪಕ್ಷಗಳು ಕಣದಲ್ಲಿದ್ದರೂ ಬಹುಮತಗಳಿಸಬಲ್ಲ ಸಾಮರ್ಥ್ಯವಿರುವ ರಾಷ್ಟ್ರೀಯ ಪಕ್ಷಗಳು ವಿರಳ. ವರ್ತಮಾನದ ಬಹುತೇಕ ಚುನಾವಣೆಗಳ ಅತಂತ್ರ ಫಲಿತಾಂಶದ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕವಾಗುತ್ತವೆ. ಹೀಗಾಗಿಯೇ ಎನ್ ಡಿಎ, ಯುಪಿಎಯಂಥ ಪ್ರಮುಖ ರಾಜಕೀಯ ಪಕ್ಷಗಳ ಒಕ್ಕೂಟಗಳು ಅಸ್ತಿತ್ವಕ್ಕೆ ಬಂದಿವೆ.

- Advertisement -

ಯುಪಿಎ -1 ಮತ್ತು 2 ಹಾಗು ಎನ್ ಡಿ ಎ ಒಕ್ಕೂಟಗಳ ಅಧಿಕಾರ ರಾಜಕಾರಣ ಅವಲಂಬಿತವಾದದ್ದು ಸಹ ಇದೆ. ಪ್ರಾದೇಶಿಕ ಪಕ್ಷಗಳ ಮೇಲೆ ಅಲ್ಲದೆ, ತೃತೀಯ ರಂಗ ಕಲ್ಪನೆಯ ನೇತೃತ್ವ ಹಾಗೂ ಅವಲಂಬನೆಯೂ ಇದೇ ಪ್ರಾದೇಶಿಕ ಪಕ್ಷಗಳೆ ಆಗಿವೆ. ಸ್ವತಂತ್ರ ಭಾರತದ ಆರಂಭದಿಂದ ಹಲವಾರು ದಶಕಗಳವರೆಗೂ ಕಾಂಗ್ರೆಸ್ ಏಕೈಕ ಪ್ರಬಲ ಪಕ್ಷವಾಗಿತ್ತು. ಇದರ ಪ್ರಾಬಲ್ಯ ಇಳಿಕೆಯಾಗುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳು ಪ್ರವರ್ಧಮಾನಕ್ಕೆ ಬಂದವು. ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದ ಪ್ರಾದೇಶಿಕ ಪಕ್ಷಗಳು ಕ್ರಮೇಣ ಕೇಂದ್ರ ಸರಕಾರಗಳ ರಚನೆಯಲ್ಲೂ ನಿರ್ಣಾಯಕ ಪಾತ್ರ ವಹಿಸಿದವು. ರಾಷ್ಟ್ರ ರಾಜಕಾರಣದಲ್ಲಿ 1989 ರಿಂದೀಚೆಗೆ ಸಮ್ಮಿಶ್ರ ಸರಕಾರದ ಪ್ರಾಬಲ್ಯವಿತ್ತು. 1989, 1991, 1996, 1998, 1999, 2004 ಮತ್ತು 2009ರಲ್ಲಿ ಸತತವಾಗಿ ಏಳು ಬಾರಿ ಅತಂತ್ರ ಲೋಕಸಭೆ ಸೃಷ್ಟಿಯಾಗಿತ್ತು. 1991ರಲ್ಲಿ ಕಾಂಗ್ರೆಸ್ ನೇತೃತ್ವದ ಅಲ್ಪಸಂಖ್ಯಾತ (ಮೈನಾರಿಟಿ) ಸರಕಾರ 5 ವರ್ಷಗಳ ಅವಧಿ ಪೂರ್ಣಗೊಳಿಸಿತು. 1999ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ನಾಯಕತ್ವದ ಎಡಿಎ 5 ವರ್ಷ ಪೂರ್ಣಗೊಳಿಸಿತ್ತು. ಹೀಗೆ ಈ ಉಭಯ ಪಕ್ಷಗಳಿಗೂ ಪ್ರಾದೇಶಿಕ ಪಕ್ಷಗಳ ಅವಲಂಬಿತ ಸಮ್ಮಿಶ್ರ ಸರಕಾರದ ಅಧಿಕಾರ ಪಡೆದ ಅನುಭವವಿದೆ. 1984ರಿಂದ ಯಾವುದೇ ಒಂದು ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸಿರಲಿಲ್ಲ. ಆದರೆ ಬರೋಬ್ಬರಿ 30 ವರ್ಷಗಳ ನಂತರ ಬಿಜೆಪಿ 2019ರಲ್ಲಿ 282 ಕ್ಷೆತ್ರಗಳಲ್ಲಿ ಜಯಭೇರಿ ಬಾರಿಸಿತ್ತು.


ಸದ್ಯಕ್ಕೆ ಭಾರತೀಯ ಚುನಾವಣ ಆಯೋಗದಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳ ಸಂಖ್ಯೆ ಸುಮಾರು 2,290. ಇದರಲ್ಲಿ ಮಾನ್ಯತೆ ಪಡೆದಿರುವ ರಾಷ್ಟ್ರೀಯ ಪಕ್ಷಗಳು 7.
ಮಾನ್ಯತೆ ಪಡೆದಿರುವ ಪ್ರಾದೇಶಿಕ (ರಾಜ್ಯ) ಪಕ್ಷಗಳು ಸುಮಾರು 59. 2019ರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಪಕ್ಷಗಳು ಸುಮಾರು 400.
ಒಂದು ಪಕ್ಷ ಚುನಾವಣಾ ಆಯೋಗದಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪಕ್ಷ ಎಂದು ಮಾನ್ಯತೆಗಳಿಸಿದರೆ ಆ ಪಕ್ಷಗಳ ಚಿಹ್ನೆಯನ್ನು ಇತರರು ಬಳಸಲು ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷ ಎಂದು ಮಾನ್ಯತೆ ಗಳಿಸಬೇಕಿದ್ದರೆ ನಾಲ್ಕು ಅಥವಾ ಹೆಚ್ಚು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರಬೇಕು. ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಆ ರಾಜ್ಯಗಳಲ್ಲಿ ಒಟ್ಟು ಮತಗಳ ಪೈಕಿ ಕನಿಷ್ಠ ಶೇ.6 ರಷ್ಟು ಮತಗಳನ್ನು ಗಳಿಸಿರಬೇಕು ಅಥವಾ ಕನಿಷ್ಠ 4 ರಾಜ್ಯಗಳಲ್ಲಿ ರಾಜ್ಯಮಟ್ಟದ ಪಕ್ಷ ಎಂಬ ಮಾನ್ಯತೆ ಹೊಂದಿರಬೇಕು ಅಥವಾ ಲೋಕಸಭೆ ಚುನಾವಣೆಯಲ್ಲಿ ಶೇ.2ರಷ್ಟು ಸೀಟುಗಳನ್ನು ಕನಿಷ್ಠ 3 ರಾಜ್ಯಗಳಲ್ಲಿ ಗೆಲ್ಲಬೇಕು. ಇವು ರಾಷ್ಟ್ರೀಯ ಪಕ್ಷಗಳಿಗೆ ಇರುವ ಮಾನದಂಡ. ಇನ್ನು ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಬಹಿರಂಗ ಕಾರಣಗಳೂ ಇವೆ. ಪ್ರಾದೇಶಿಕ ವಿಚಾರಗಳಿಗೆ ಮೊದಲ ಆದ್ಯತೆ, ಮೀಸಲಾತಿ, ಪ್ರತ್ಯೆಕತೆ, ರಾಜ್ಯವಾರು ಯೋಜನೆಗಳಿಗೆ ಪುಷ್ಟಿ ಇವು ಪ್ರಮುಖ ಅಜಂಡಾಗಳಾಗಿರುತ್ತವೆ.
ಪ್ರಾದೇಶಿಕ ಪಕ್ಷಗಳೆಂದು ವರ್ಗೀಕರಿಸಲ್ಪಟ್ಟ ಪಕ್ಷಗಳ ಸ್ಥಾಪನೆಯು ವಿಶೇಷವಾಗಿ 1967ರ ನಂತರ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷ ಪಾತ್ರ ವಹಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶದ ಮತದಾರರ ಮೇಲೆ ತನ್ನ ಹಿಡಿತವನ್ನು ಸಡಿಲಗೊಳಿಸಲು ಆರಂಭಿಸಿದ ನಂತರವೇ ಹೆಚ್ಚು ಸ್ಥಾಪಿತಗೊಳ್ಳಲು ಪ್ರಾರಂಭಗೊಂಡವು.

- Advertisement -


ಪ್ರಸ್ತುತ, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಾವಣಿಯಾಗಿವೆ. ಇವುಗಳಲ್ಲಿ ಹಲವು ಪಕ್ಷಗಳು ಕೆಲ ರಾಜ್ಯಗಳಲ್ಲಿ ಅಧಿಕಾರದಲ್ಲಿವೆ ಮತ್ತು ಕೆಲವು ತಮ್ಮ ಸರದಿಗಾಗಿ ಕಾಯುತ್ತಿವೆ. ವರ್ತಮಾನದ ಭಾರತೀಯ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ಚುಕ್ಕಾಣಿಯನ್ನು ಹಿಡಿದಿವೆ, ಅಲ್ಲದೆ ರಾಷ್ಟ್ರೀಯ ಪಕ್ಷಗಳಿಗೆ ಸವಾಲನ್ನು ನೀಡಿವೆ. ಇವು ರಾಷ್ಟ್ರೀಯ ಪಕ್ಷಗಳಿಂದ ಆಗುತ್ತಿರುವ ಒಂದು ನಿರ್ದಿಷ್ಟ ಪ್ರದೇಶ ಅಥವಾ ರಾಜ್ಯದ ರಾಜಕೀಯ ಮತ್ತು ಆರ್ಥಿಕ ನಿರ್ಲಕ್ಷ್ಯವನ್ನು ಪ್ರಮುಖ ಉದ್ದೇಶವಾಗಿಸಿಕೊಂಡು ತಮ್ಮ ಅಧಿಕಾರ ಮತ್ತು ಮತದಾರರ ವಿಸ್ತರಣೆಯನ್ನು ಹೆಚ್ಚಿಸಿಕೊಳ್ಳುತ್ತಿವೆ.
ಶಿರೋಮಣಿ ಅಕಾಲಿದಳ ಅತ್ಯಂತ ಹಳೆಯ ಪ್ರಾದೇಶಿಕ ಪಕ್ಷಗಳಲ್ಲಿ ಒಂದು. ಈ ಪಕ್ಷವನ್ನು 1920ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಅವಿಭಜಿತ ಪಂಜಾಬ್ ನಲ್ಲಿ ಸಿಖ್ಖರು ಮುಖ್ಯ ಪ್ರತಿನಿಧಿಯಾಗಲು ಇವರ ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಸ್ಥಾಪಿಸಿತು.
ಪ್ರಾದೇಶಿಕ ಪಕ್ಷಗಳು ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಬಿಹಾರ, ದೆಹಲಿ, ನಾಗಾಲ್ಯಾಂಡ್, ಒರಿಸ್ಸಾ, ಪಂಜಾಬ್, ಸಿಕ್ಕಿಂ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಥವಾ ರಾಷ್ಟ್ರೀಯ ಪಕ್ಷಗಳ ಸಹಯೋಗದೊಂದಿಗೆ ಆಡಳಿತ ನಡೆಸುತ್ತಿವೆ.
ಈ ಎಲ್ಲ ಪ್ರಾದೇಶಿಕ ಪಕ್ಷಗಳ ವಿಶೇಷತೆಗಳೆಂದರೆ ಪಕ್ಷದೊಳಗೆ ಅಧಿಕಾರವನ್ನು ಪ್ರಶ್ನೆ ಮಾಡಲಾಗದ ನಾಯಕನ ಆಜ್ಞೆಯ ಮೇರೆಗೆ ಸಂಪೂರ್ಣ ಪಕ್ಷ ಅವಲಂಬನೆಯಾಗಿರುತ್ತದೆ.ಸಂಕ್ಷಿಪ್ತವಾಗಿ ಹೇಳುವುದಾದರೆ ಅವರನ್ನು ಒಬ್ಬನೇ ನಾಯಕ ಹಾಗೂ ಆತನ ಆಪ್ತರು ನಡೆಸುತ್ತಾರೆ. ಅವರ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಅದೇ ಜಾತಿಯ ಮುಖಂಡರು ಕೂಡ ಪಕ್ಷದ ವ್ಯವಹಾರಗಳಲ್ಲಿ ಸಾಕಷ್ಟು ಹಸ್ತಕ್ಷೇಪ ಮತ್ತು ಹಿಡಿತ ಸಾಧಿಸಿರುತ್ತಾರೆ. ಕೆಲವು ವಿಚಾರಧಾರೆ ಮತ್ತು ಸೈದ್ಧಾಂತಿಕ ಆಧಾರದ ಮೇಲೆ ರೂಪುಗೊಂಡ ಇಂತಹ ಪ್ರಾದೇಶಿಕ ಪಕ್ಷಗಳು ಕಾಲಾನಂತರ ವೈಯಕ್ತಿಕ ಹಿತಾಸಕ್ತಿ, ಕೌಟುಂಬಿಕ ಹಿತಾಸಕ್ತಿ ಹಾಗೂ ಒಂದು ಜಾತಿಯ ಹಿತಾಸಕ್ತಿಗಳನ್ನು ರಕ್ಷಿಸುವ ಸಾಧನವಾಗಿ ಮಾರ್ಪಟ್ಟಿವೆ. ಆಯಾ ಜಾತಿಗಳ ಆಧುನಿಕ ರಿಪಬ್ಲಿಕನ್/ಸಾಮ್ರಾಜ್ಯಗಳಾಗಿ ವಿಸ್ತಾರಗೊಂಡಿವೆ.


ಇದಕ್ಕೆ ಉದಾಹರಣೆಯಾಗಿ ಕೆಲ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ನೋಡಬಹುದು. ಉತ್ತರಪ್ರದೇಶದ ರಾಷ್ಟ್ರೀಯ ಲೋಕದಳ ಪಕ್ಷವನ್ನು 1996ರಲ್ಲಿ ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಸ್ಥಾಪಿಸಿದರು. ಇದು ರಾಜ್ಯದ ಜಾಟ್ ಜಾತಿ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಭಾವ ಹೊಂದಿದೆ. ಅಜಿತ್ ಸಿಂಗ್ ತನ್ನ ತಂದೆ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರವರ ರಾಜಕೀಯ ವಾರಸುದಾರ. ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಅಜಿತ್ ಸಿಂಗ್ ನಿಧನದ ನಂತರ ಮಥುರಾದಿಂದ ಒಮ್ಮೆ ಸಂಸದರಾಗಿದ್ದ ಜಯಂತ್ ಚೌಧರಿಯವರು ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.


ಶಿರೋಮಣಿ ಅಕಾಲಿ ದಳ ಪಕ್ಷವು ಪಂಜಾಬಿನಲ್ಲಿ ಹಲವು ಬಾರಿ ಅಧಿಕಾರದಲ್ಲಿತ್ತು. ಆದರೆ 1970ರಿಂದ ಪ್ರಕಾಶ್ ಸಿಂಗ್ ಬಾದಲ್ ನಾಲ್ಕನೇ ಮುಖ್ಯಮಂತ್ರಿಯಾದ ನಂತರ ಪಕ್ಷದಲ್ಲಿ ಸಂಪೂರ್ಣ ಅಧಿಕಾರವು ಅವರ ಕುಟುಂಬದೊಂದಿಗೆ ಕೇಂದ್ರೀಕೃತವಾಯಿತು. ಬಿಜೆಪಿ ಮತ್ತು ಅಕಾಲಿಯ ಮೈತ್ರಿ 2007ರಿಂದಲೂ ಮುಂದುವರೆದಿದೆ. ಪ್ರಕಾಶ್ ಸಿಂಗ್ ಬಾದಲ್ ಅವರ ಮಗ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಸುಖಬೀರ್ ಸಿಂಗ್ ಬಾದಲ್ ಪತ್ನಿ ಹರ್ಸಿಮ್ರತ್ ಕೌರ್ ಬಾದಲ್ ಕೂಡ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರು. ಹರಿಯಾಣದಲ್ಲಿ ಇಂಡಿಯನ್ ನ್ಯಾಷನಲ್ ಲೋಕದಳವನ್ನು (ಐಎನ್ ಎಲ್ ಡಿ)ಮಾಜಿ ಉಪಪ್ರಧಾನಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಚೌಧರಿ ದೇವಿ ಲಾಲ್ ಅವರು ಅಕ್ಟೋಬರ್ 1996ರಲ್ಲಿ ಹರಿಯಾಣ ಲೋಕದಳವಾಗಿ ಸ್ಥಾಪಿಸಿದರು. ಇದನ್ನು 1998ರಲ್ಲಿ ಐಎನ್ ಎಲ್ ಡಿ ಎಂದು ಮರುನಾಮಕರಣ ಮಾಡಲಾಯಿತು. ದೇವಿ ಲಾಲ್ ರವರ ಮಗ ಓಂಪ್ರಕಾಶ್ ಚೌಟಾಲಾ ಪಕ್ಷದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ ಮತ್ತು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯೂ ಸಹ ಆಗಿದ್ದಾರೆ. ಓಂ ಪ್ರಕಾಶ್ ಚೌಟಾಲಾ ಅವರ ಪುತ್ರ ಅಜಯ್ ಸಿಂಗ್ ಚೌಟಾಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮೇಘಾಲಯದಲ್ಲಿ ಎನ್ ಪಿಪಿ ಪಕ್ಷ ಪಿ.ಎ. ಸಂಗ್ಮರವರಿಂದ 2013ರಲ್ಲಿ ಸ್ಥಾಪನೆಗೊಂಡಿತು. ಇಂದು ಬಿಜೆಪಿ ಪಕ್ಷದ ಸಹಮತದೊಂದಿಗೆ ಅವರ ಮಗ ಕಾರ್ನಾಡ್ ಸಂಗ್ಮಾ ಮುಖ್ಯಮಂತ್ರಿಯಾಗಿದ್ದಾರೆ.
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅನ್ನು ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಅಣ್ಣಾದೊರೈ 1949ರಲ್ಲಿ ಸ್ಥಾಪಿಸಿದರು ಮತ್ತು 1967ರಲ್ಲಿ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಅಂದಿನಿಂದ ಡಿಎಂಕೆ 1972ರಲ್ಲಿ ವಿಭಜನೆ ಸೇರಿದಂತೆ ಹಲವು ಬದಲಾವಣೆಗಳಿಗೆ ಒಳಗಾಯಿತು. ನಂತರ ಅದರ ಖಜಾಂಚಿ ಮತ್ತು ಜನಪ್ರಿಯ ಚಲನಚಿತ್ರ ಕಲಾವಿದ ಎಂಜಿ ರಾಮಚಂದ್ರನ್ ಅಖಿಲ ಭಾರತ ಅಣ್ಣ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. ಅಂದಿನಿಂದ ಈ ಎರಡು ಪಕ್ಷಗಳು ರಾಜ್ಯದಲ್ಲಿ ಪರ್ಯಾಯವಾಗಿ ಅಧಿಕಾರ ನಡೆಸುತ್ತಿವೆ. ಈ ಎರಡೂ ಪಕ್ಷಗಳು ತಮ್ಮ ಏಕೈಕ ನಾಯಕನ ವೈಯಕ್ತಿಕ ವರ್ಚಸ್ಸು ಮತ್ತು ಕುಟುಂಬ ರಾಜಕಾರಣದ ಮೇಲೆ ಅವಲಂಬಿತವಾಗಿವೆ. ಡಿಎಂಕೆಯು ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯ ಕುಟುಂಬ ನಿಯಂತ್ರಿಸಲ್ಪಟ್ಟಿದ್ದರೆ, ಎಐಎಡಿಎಂಕೆ ಮೊದಲು ಎಂಜಿ ರಾಮಚಂದ್ರನ್ ಮತ್ತು ಅವರ ಸಹೋದ್ಯೋಗಿ ಜೆ. ಜಯಲಲಿತಾರ ಕೈಯಲ್ಲಿತ್ತು. 1987ರಲ್ಲಿ ಎಂ.ಜಿ.ಆರ್ ನಿಧನದ ನಂತರ ಪಕ್ಷದ ಜವಾಬ್ದಾರಿ ಜಯಲಲಿತಾರ ಕೈಯಲ್ಲಿತ್ತು. ಅವರು ಐದು ಬಾರಿ ಮುಖ್ಯಮಂತ್ರಿಯೂ ಆಗಿದ್ದರು.


ಡಿಎಂಕೆ ಮುಖ್ಯಸ್ಥ ಕರುಣಾನಿಧಿ ತಮ್ಮ ಕಿರಿಯ ಪುತ್ರ ಎಂಕೆ ಸ್ಟಾಲಿನ್ ಅವರನ್ನು ಅನಧಿಕೃತವಾಗಿ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದರೂ ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಕುಟುಂಬದಲ್ಲಿ ವೈಷಮ್ಯದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸದ್ಯ ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆಡಳಿತ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ತಣಮೂಲ ಕಾಂಗ್ರೆಸ್ ಇತರ ಪ್ರಾದೇಶಿಕ ಪಕ್ಷಗಳಿಗಿಂತ ಭಿನ್ನವಾಗಿಲ್ಲ. ಇದು ಕೂಡ ಒಬ್ಬ ವ್ಯಕ್ತಿಯಿಂದ ನಡೆಸಲ್ಪಡುವ ಪಕ್ಷವಾಗಿದೆ. ಮಮತಾ ಅವರ ಆದೇಶವೇ ಅಂತಿಮ ನಿರ್ಧಾರವಾಗಿದ್ದು ಪಕ್ಷದಲ್ಲಿ ಯಾವುದೇ ಸಮಾಲೋಚನೆಯ ಪ್ರಶ್ನೆಯಿಲ್ಲ. ಮಮತಾ ಅವರ ಪ್ರಭಾವದಿಂದಾಗಿ ಮೂರು ದಶಕಗಳ ಕಾಲ ಆಳಿದ ಎಡ ಪಕ್ಷಗಳನ್ನು ಸೋಲಿಸಿ ಪಕ್ಷವು ಎರಡು ಬಾರಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಮೂರು ಪ್ರಾದೇಶಿಕ ಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್)ಹಾಗು ವೈಎಸ್ ಆರ್ ಪಕ್ಷಗಳು ಆಳುತ್ತಿವೆ. ಆಂಧ್ರಪ್ರದೇಶದಿಂದ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ರಚಿಸಬೇಕೆಂಬ ಚಳುವಳಿಯಿಂದ ಟಿಆರ್ ಎಸ್ 2001ರಲ್ಲಿ ಜನಿಸಿತು. 2014ರಲ್ಲಿ ನಡೆದ ಮೊದಲ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತ್ತು ಮತ್ತು ಅದರ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ರಾವ್ ಪಕ್ಷದ ಅಧ್ಯಕ್ಷರು ಮತ್ತು ರಾಜ್ಯದ ಮುಖ್ಯಮಂತ್ರಿ ಕೂಡ. ಅವರ ಮಗ ಕೆ.ಟಿ.ರಾಮರಾವ್ ರಾಜ್ಯ ಸರ್ಕಾರದಲ್ಲಿ ಮಂತ್ರಿ ಮತ್ತು ಮಗಳು ಕೆ ಕವಿತಾ ಶಾಸಕಿಯಾಗಿದ್ದಾರೆ.

ಅದೇ ರೀತಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಕೂಡ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಮಾವ ಎನ್.ಟಿ.ರಾಮರಾವ್ ರ ಮರಣದ ನಂತರ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು ಮತ್ತು 1995ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿದ್ದರು. 2014ರಿಂದ ಮತ್ತೆ ಆಂಧ್ರಪ್ರದೇಶ ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಜು ಜನತಾದಳ (ಬಿಜೆಡಿ)ಪಕ್ಷವು 1997ರಲ್ಲಿ ಒರಿಸ್ಸಾದಲ್ಲಿ ಸ್ಥಾಪನೆಯಾದ ಮೂರು ವರ್ಷಗಳಲ್ಲಿಯೇ ಅಧಿಕಾರದ ಚುಕ್ಕಾಣಿ ಹಿಡಿಯಿತು. ನಂತರ ಅದು ನಿರಂತರವಾಗಿ ಅಧಿಕಾರದಲ್ಲಿತ್ತು. ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಪುತ್ರ ನವೀನ್ ಪಟ್ನಾಯಕ್ ಸತತ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿದ್ದರು. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅಂದಿನ ಬಿಜೆಪಿ ನೇತೃತ್ವದ ವಾಜಪೇಯಿಯವರ ಎನ್ ಡಿಎ ಒಕ್ಕೂಟ ಸರ್ಕಾರದಲ್ಲಿ ಕೇಂದ್ರ ಗಣಿ ಸಚಿವರಾಗಿದ್ದರು. ಅಲ್ಲದೆ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಕೂಡಾ ಮಾಡಿಕೊಂಡು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. 2009ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಬಿಜೆಪಿ ಜೊತೆಗಿನ ಚುನಾವಣಾ ಮೈತ್ರಿಯನ್ನು ಮುರಿದುಕೊಂಡಿತು.

ಇತರೆ ಪ್ರಾದೇಶಿಕ ಪಕ್ಷಗಳಂತೆ ಇಲ್ಲಿಯು ಸಹ ಏಕ ವ್ಯಕ್ತಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ದೇಶದಲ್ಲಿ ಇಂತಹ ಏಕವ್ಯಕ್ತಿ, ಏಕ ಕುಟುಂಬ, ಏಕ ಪ್ರಬಲ ಜಾತಿ ಸಮುದಾಯ ಕೇಂದ್ರೀತ ಪ್ರಾದೇಶಿಕ ಪಕ್ಷಗಳಲ್ಲದೆ, ಮಾರ್ಕ್ಸ್-ಮಾವೋ ಸಿದ್ಧಾಂತಗಳನ್ನು ತಮ್ಮ ಪ್ರಣಾಳಿಕೆ ಗಳನ್ನಾಗಿಸಿಕೊಂಡ ಸಿಪಿಐ, ಸಿಪಿಐಎಂ, ಸಿಪಿಐಎಂಎಲ್, ಫಾರ್ವರ್ಡ್ ಬ್ಲಾಕ್ ನಂತಹ ಸುಮಾರು ಹತ್ತು ಪಕ್ಷಗಳು ಸಕ್ರಿಯವಾಗಿವೆ. ಸಮಾಜವಾದ-ಸಮತಾವಾದ-ಲೋಹಿಯಾ-ಜಯಪ್ರಕಾಶ್ ನಾರಾಯಣ್ ರ ವಿಚಾರಧಾರೆಗಳ ವಿಸ್ತರಣೆಯ ಉದ್ದೇಶಹೊಂದಿ ಸುಮಾರು 8 ಪಕ್ಷಗಳು ಪ್ರತಿ ಚುನಾವಣೆಯಲ್ಲಿಯೂ ಸಕ್ರಿಯವಾಗಿವೆ. ಬಾಬಾಸಾಹೇಬ ಅಂಬೇಡ್ಕರರ ಸಿದ್ಧಾಂತಗಳ ಆಧಾರದ ಮೇಲೆ ಸುಮಾರು ನೂರ ಹತ್ತಕ್ಕೂ ಹೆಚ್ಚು ಪಕ್ಷಗಳು ನೋಂದಣಿಗೊಂಡಿವೆ. ಅಂಬೇಡ್ಕರಿಸಮ್ ಅನ್ನೇ ಮುಖ್ಯ ಸಿದ್ಧಾಂತವನ್ನಾಗಿಸಿಕೊಂಡ ಎಸ್ಸಿ /ದಲಿತ ನೇತೃತ್ವದ ಬಿಎಸ್ಪಿ, ಎಲ್ ಜೆಪಿ, ಆರ್ ಪಿಐ ಪಕ್ಷಗಳೂ ಸಹ ಏಕ ವ್ಯಕ್ತಿ, ಕುಟುಂಬ ಆಯಾ ಪಕ್ಷಗಳ ಸ್ಥಾಪಿತರ ಜಾತಿ ಕೇಂದ್ರಿತ ಪಕ್ಷಗಳೇ ಆಗಿವೆ. ಈ ಪ್ರಮುಖ ಮೂರು ದಲಿತ ಪಕ್ಷಗಳೂ ಸಹ ಬಿಜೆಪಿ ಹಾಗೂ ಎನ್ ಡಿಎಗಳ ಜೊತೆ ಅಧಿಕಾರ ಹಂಚಿಕೊಂಡವರೇ ಆಗಿದ್ದಾರೆ. ವಿಶೇಷವಾಗಿ ಮುಸ್ಲಿಂ ಲೀಗ್, ಎಐಎಂಐಎಂ, ಎಸ್ ಡಿಪಿಐ, ಟಿಎಂಎಂಕೆ, ಡಬ್ಲ್ಯೂಪಿಐಯಂತಹ ಮುಸ್ಲಿಮ್ ನೇತೃತ್ವದ ಜಾತ್ಯತೀತ ಪಕ್ಷಗಳೂ ಸಹ ಭಾರತದ ಅಲ್ಪಸಂಖ್ಯಾತರಾದ ಮುಸ್ಲಿಮ್ ಸಮುದಾಯದ ಸಂವಿಧಾನಾತ್ಮಕ ಹಿತಕಾಯುವ ಗುರಿ -ಉದ್ದೇಶಗಳೊಂದಿಗೆ ಕ್ರಿಯಾಶೀಲವಾಗಿವೆ.


ಇನ್ನು ರಾಜ್ಯದ ಜೆಡಿ(ಎಸ್)ಪಕ್ಷ ಒಮ್ಮೆ ರಾಷ್ಟ್ರ ಪ್ರಧಾನಮಂತ್ರಿ ಹಾಗು ಮೂರು ಬಾರಿ ಮುಖ್ಯಮಂತ್ರಿಯ ಅಧಿಕಾರವನ್ನು ನೋಡಿದೆ. ಒಮ್ಮೆ ಕಾಂಗ್ರೆಸ್ ಜೊತೆಗೆ ಮತ್ತೊಮ್ಮೆ ಬಿಜೆಪಿ ಜೊತೆ ಈ ಪಕ್ಷದ ಸಖ್ಯದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾದುದು ಕೂಡಾ. ಭಾರತದ ಬಹುತೇಕ ಪ್ರಾದೇಶಿಕ ಪಕ್ಷಗಳು ಜನ್ಮ ತಾಳಿದ್ದು ಬ್ರಾಹ್ಮಣರ ನಂತರದ ಮೇಲ್ಜಾತಿ ಸಮುದಾಯಗಳಿಂದ. ಜೊತೆಗೆ ಈ ನವ ಸಾಮ್ರಾಜ್ಯಶಾಹಿ ಪಕ್ಷಗಳೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಜೆಪಿ ಪಕ್ಷದ ಭದ್ರಬುನಾದಿಗೆ ಸಹಕಾರಿಯಾದದ್ದು.
ಇಂತಹ ಮೇಲ್ಜಾತಿ/ಮೇಲ್ವರ್ಗ/ಭೂಮಾಲೀಕರ ನೇತೃತ್ವದ ಪ್ರಾದೇಶಿಕ ಪಕ್ಷಗಳನ್ನು ಪ್ರಾರಂಭದಲ್ಲಿ ಮೈತ್ರಿ ಮಾಡಿ ನಂತರ ಆ ಪಕ್ಷಗಳನ್ನು ಹೊಡೆಯುವ ಅಥವಾ ನಿಷ್ಕ್ರಿಯಗೊಳಿಸುವ ರಾಜಕೀಯ ತಂತ್ರದ ಮೂಲಕ ಬಿಜೆಪಿ ಇಂದು ಕೇಂದ್ರದಲ್ಲಿ ಮತ್ತು 12 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಈ ನಡುವೆ ಒಬಿಸಿ ಜಾತಿ ಸಮುದಾಯಗಳ ನೇತೃತ್ವದಲ್ಲಿ ಆಂಧ್ರದ ಬಲಿಜಿಗ ಸಮುದಾಯದ ನಟ ಚಿರಂಜೀವಿ, ಕರ್ನಾಟಕದ ಕುರುಬ ಸಮುದಾಯದ ಸಿದ್ದರಾಮಯ್ಯ ಹಾಗು ಎಸ್ಟಿ ಸಮುದಾಯದ ಮುಖಂಡ ಶ್ರೀರಾಮುಲು, ತಮಿಳುರಾಜ್ಯದ ಹಿಂದುಳಿದ ಸಮುದಾಯಕ್ಕೆ ಸೇರಿದ ರಾಮ್ ದಾಸ್ ಮುಂತಾದ ಒಬಿಸಿ ಸಮುದಾಯದ ಮುಖಂಡರು ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.


ಬಹುತೇಕ ಪ್ರಾದೇಶಿಕ ಪಕ್ಷಗಳು ವೈಯಕ್ತಿಕ ಆಧಾರಿತ ಮತ್ತು ಒಬ್ಬ ವ್ಯಕ್ತಿ ಅಥವಾ (ಅವರ)ಜಾತಿ /ಸಮುದಾಯದ ಕುಟುಂಬದಿಂದ ಆಡಳಿತ ನಡೆಯುತ್ತಿರುತ್ತವೆ. ಈ ಪಕ್ಷಗಳಲ್ಲಿ ಹೊಸ ಉತ್ತರಾಧಿಕಾರಿಗೆ ಸುಲಭವಾಗಿ ಅಧಿಕಾರ ವರ್ಗಾವಣೆಯಾಗುತ್ತದೆ. ಕುಟುಂಬದ ಸದಸ್ಯರಲ್ಲಿಯೇ ಹೆಚ್ಚು ಅಧಿಕಾರವನ್ನು ಹಂಚಲಾಗುತ್ತದೆ. ಇಂತಹ ವ್ಯಕ್ತಿ, ಕುಟುಂಬ, ಜಾತಿ ಸಮುದಾಯ ಕೇಂದ್ರೀತ ಪ್ರಾದೇಶಿಕ ಪಕ್ಷಗಳ ಹುಟ್ಟು ಮತ್ತು ಉಳಿವು ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರಕ ವಲ್ಲದಿದ್ದರೂ ಬಿಜೆಪಿ ಪಕ್ಷಕ್ಕಂತೂ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿದೆ.



Join Whatsapp