8 ಹೈಕೋರ್ಟ್ ಗಳಿಗೆ ನ್ಯಾಯಮೂರ್ತಿಗಳ ನೇಮಕ ಸೇರಿದಂತೆ ಮಹತ್ವದ ತೀರ್ಮಾನಕ್ಕೆ ಮುಂದಾದ ಸುಪ್ರೀಮ್ ಕೋರ್ಟ್ ಕೊಲಿಜಿಯಮ್

Prasthutha|

ನವದೆಹಲಿ: ಪ್ರಮುಖ ನಿರ್ಧಾರವೊಂದರಲ್ಲಿ ಸುಪ್ರೀಮ್ ಕೋರ್ಟ್ ಕೊಲಿಜಿಯಮ್ ಎಂಟು ಹೈಕೋರ್ಟ್ ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮತ್ತು ಇತರ ಐದು ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆಗೆ ಶಿಫಾರಸ್ಸು ಮಾಡಿದೆ. ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಬೆಂಚ್ ನ ಹಿರಿಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕಲ್ಕತ್ತಾ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರನ್ನು ಅಲಹಾಬಾದ್ ಹೈಕೋರ್ಟ್ ಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದೆ.

- Advertisement -

ಪ್ರಸಕ್ತ ತ್ರಿಪುರಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಅಕಿಲ್ ಖುರೇಶಿ ಅವರನ್ನು ರಾಜಸ್ತಾನ ಹೈಕೋರ್ಟ್ ಗೆ , ರಾಜಸ್ತಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಅವರನ್ನು ತ್ರಿಪುರಾ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ. ಮಾತ್ರವಲ್ಲ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಕಾಶ್ ಶ್ರೀ ವಾಸ್ತವ, ಆಂಧ್ರಪ್ರದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಶಾಂತ್ ಕುಮಾರ್ ಮಿಶ್ರಾ, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕೆ.ಸಿ ಶರ್ಮಾ, ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಂಜಿತ್ ವಿ. ಮೋರ್, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅರವಿಂದ್ ಕುಮಾರ್, ಮಧ್ಯಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಆರ್.ವಿ ಮಾಲಿಮತ್ ಅವರನ್ನು ಮೇಲ್ಕಂಡ ನ್ಯಾಯಾಲಯಗಳಿಗೆ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಮ್ ಕೋರ್ಟ್ ಕೊಲಿಜಿಯಮ್ ಶಿಫಾರಸ್ಸು ಮಾಡಿದೆ.

ಆಂಧ್ರಪ್ರದೇಶದ ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಅವರನ್ನು ಛತ್ತೀಸ್ ಗಡ ಹೈಕೋರ್ಟ್ ಗೆ ವರ್ಗಾಯಿಸಲು ಕೊಲಿಜಿಯಂ ಅನುಮೋದನೆ ನೀಡಿದೆ. ಅದೇ ರೀತಿ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ರಫೀಕ್ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಹಾಗೂ ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಶ್ವಾನಾಥ್ ಸೋಮದ್ದೆರ್ ಅವರನ್ನು ಸಿಕ್ಕಿಂ ಹೈಕೋರ್ಟ್ ಗೆ ವರ್ಗಾವಣೆಗೆ ಅನುಮೋದನೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ವಿವಿಧ ಹೈಕೋರ್ಟ್ ಗಳಿಂದ 28 ನ್ಯಾಯಧೀಶರ ವರ್ಗಾವಣೆಗೆ ನಿರ್ಧರಿಸಿದೆ.



Join Whatsapp