ಸಂಘಪರಿವಾರದಿಂದ ಪ್ರತಿಭಟನೆ: ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತನ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ

Prasthutha|

ಮೈಸೂರು: ನಂಜನಗೂಡಿನಲ್ಲಿ ದೇವಸ್ಥಾನ ತೆರವುಗೊಳಿಸಿರುವುದನ್ನು ಖಂಡಿಸಿ ಸಂಘಪರಿವಾರ ಸಂಘಟನೆಗಳು ಮೈಸೂರು ಪ್ಯಾಲೇಸ್ ಬಳಿ ನಡೆಸುತ್ತಿದ್ದ ಪ್ರತಿಭಟನೆಯ ವರದಿಗೆ ತೆರಳಿದ್ದ ವರದಿಗಾರರೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.

- Advertisement -

“ ಡೈಲಿ ಕೌಸರ್ “ ಚಾನಲ್ ನ ಮುಖ್ಯ ಸಂಪಾದಕ ಮುಹಮ್ಮದ್ ಸಫ್ದರ್ ಖೈಸರ್ ಹಲ್ಲೆಗೊಳಗಾದವರು. ನಂಜನಗೂಡಿನಲ್ಲಿರುವ ದೇವಸ್ಥಾನವನ್ನು ಇತ್ತೀಚೆಗೆ ಜಿಲ್ಲಾಡಳಿತ ತೆರವುಗೊಳಿಸಿತ್ತು. ಇದರ ವಿರುದ್ಧ ಗುರುವಾರ ಮೈಸೂರು ಪ್ಯಾಲೇಸ್ ಬಳಿ ಹಿಂದು ಜಾಗರಣ ವೇದಿಕೆಯವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯ ವರದಿ ಮಾಡಲು ಖೈಸರ್ ಅವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಪತ್ರಕರ್ತ ಖೈಸರ್ ಮೇಲೆ ಹಿಂಜಾವೇ ಕಾರ್ಯಕರ್ತರು ಹಲ್ಲೆ ನಡೆಸಿದರು. ಪೊಲೀಸರು ಖೈಸರ್ ಅವರನ್ನು ಸುತ್ತುವರೆದರೂ ಸಂಘಪರಿವಾರದದವರು ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿದೆ.

ಖೈಸರ್ ಅವರು ಹಿಂದೂ ಜಾಗರಣ ವೇದಿಕೆಯ ನಾಯಕ ಜಗದೀಶ್ ಕಾರಂತ್ ಅವರ ಭಾಷಣವನ್ನು ರೆಕಾರ್ಡ್ ಮಾಡುತ್ತಿದ್ದರು. ಆಗ ವೇದಿಕೆಯ ಕಾರ್ಯಕರ್ತರು, ಭಾಷಣ ರೆಕಾರ್ಡ್ ಮಾಡದಂತೆ ತಡೆವೊಡ್ಡಿ ಅವರನ್ನು ಸುತ್ತುವರಿದು ಹಲ್ಲೆ ನಡೆಸಿದರು. ಮಾತ್ರವಲ್ಲ ಭಾಷಣದ ರೆಕಾರ್ಡ್ ಡಿಲಿಟ್ ಮಾಡುವಂತೆ ಒತ್ತಡ ಹೇರಿದರು.
ನಾನು ಪತ್ರಕರ್ತ ಎಂದು ಗುರುತಿನ ಚೀಟಿ ತೋರಿಸಿದರೂ ಕಾರ್ಯಕರ್ತರು ದೊಣ್ಣೆ ಹಾಗೂ ಕೈಯಿಂದ ಹಲ್ಲೆ ನಡೆಸಿದರು.
ತಕ್ಷಣ ಪೊಲೀಸರು ಖೈಸರ್ ಅವರನ್ನು ಸುತ್ತುವರಿದು ಅಲ್ಲಿಂದ ರಕ್ಷಿಸಿ ಸಮೀಪದಲ್ಲಿದ್ದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕೊಠಡಿಗೆ ಕರೆದುಕೊಂಡು ಹೋದರು.

- Advertisement -

ಅವರು ಪತ್ರಕರ್ತರು ಎಂದು ತಿಳಿದ ಬಳಿಕವೂ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಇತರ ಪತ್ರಕರ್ತರು ಆರೋಪಿಸಿದ್ದಾರೆ.
ಹಲ್ಲೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ –ಎಂಡಿಜೆಎ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ಮನವಿ ಮಾಡಿದೆ. ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವರದಿ ಮಾಡುವಾಗ ಪತ್ರಕರ್ತರಿಗೆ ರಕ್ಷಣೆ ನೀಡುವಂತೆಯೂ ಸಂಘ ಮನವಿ ಮಾಡಿದೆ.

ಪತ್ರಕರ್ತ ಖೈಸರ್ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.



Join Whatsapp