ಚರ್ಚ್, ಮಸೀದಿ ಕೇವಲ ಪ್ರಾರ್ಥನಾ ಕೊಠಡಿ, ಅವುಗಳನ್ನು ಧ್ವಂಸ ಮಾಡಬಹುದು: ಬಿಜೆಪಿ ಸಂಸದ ಪ್ರತಾಪ್ ಸಿಂಹ

Prasthutha|

ಮೈಸೂರು: ಚರ್ಚ್, ಗೋರಿ, ಮಸೀದಿಯನ್ನು ದೇವಸ್ಥಾನಕ್ಕೆ ಹೋಲಿಸಬೇಡಿ, ಚರ್ಚ್, ಮಸೀದಿ ಕೇವಲ ಪ್ರಾರ್ಥನಾ ಮಂದಿರವಷ್ಟೇ. ಅವುಗಳನ್ನು ನೀವು ಡೆಮಾಲಿಶ್ ಮಾಡಬಹುದು, ಅಲ್ಲಿ ಯಾವುದೇ ವಿಗ್ರಹಗಳಿರುವುದಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ರಸ್ತೆಗೆ ಹೊಂದಿಕೊಂಡಂತೆ ಇದ್ದ ನಂಜನಗೂಡು ತಾಲೂಕು ಉಚ್ಚಗಣಿ ಮಹದೇವಮ್ಮ ದೇವಸ್ಥಾನವನ್ನು ಸೆ.8ರಂದು ಮುಂಜಾನೆ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಧ್ವಂಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಚರ್ಚ್, ಮಸೀದಿ ಕೇವಲ ಪ್ರಾರ್ಥನಾ ಹಾಲ್ ಗಳಷ್ಟೇ. ಅದು ಕೇವಲ ಪ್ರಾರ್ಥನಾ ಕೊಠಡಿ, ಅಲ್ಲಿ ಯಾವುದೇ ವಿಗ್ರಹಗಳಿರುವುದಿಲ್ಲ. ವಿಗ್ರಹಗಳಿದ್ದರೂ ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡಿರುವುದಿಲ್ಲ. ಅದನ್ನು ನೀವು ಧ್ವಂಸ ಮಾಡಬಹುದು ಎಂದು ಹೇಳಿದರು.

ಒಬ್ಬ ಕ್ರಿಶ್ಚಿಯನ್ ಕರ್ನಾಟಕ, ತಮಿಳುನಾಡು ಅಥವಾ ಜಮ್ಮು ಕಾಶ್ಮೀರ ಇನ್ನಾವುದೋ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ ಅವನ ಕಣ್ಣೆದುರು ರೋಮ್ , ಬೆಥ್ಲೆಹೇಮ್ ಬರುತ್ತದೆ. ಒಬ್ಬ ಮುಸ್ಲಿಮ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಬೇಕಾದರೆ ಅವನ ಕಣ್ಣೆದುರು ಮಕ್ಕಾ, ಮದೀನಾ ಬರುತ್ತದೆ. ಆದರೆ ಈ ದೇಶದ ಹಿಂದೂ,  ರಸ್ತೆ ಬದಿಯ ಗುಡಿಯಲ್ಲೇ ಅಯೋಧ್ಯೆ, ಜಗನ್ನಾಥ, ಕೃಷ್ಣನನ್ನು ಕಾಣುತ್ತಾನೆ. ಯಾಕೆಂದರೆ ಆತ ಪ್ರಾಣ ಪ್ರತಿಷ್ಠೆಯನ್ನು ಅಲ್ಲೇ ಮಾಡಿರುತ್ತಾನೆ. ಅಲ್ಲೇ ಆತ ತನ್ನ ನಂಬಿಕೆಯ ಇಡುಗಂಟನ್ನು ಇಟ್ಟಿರುತ್ತಾನೆ. ಆದ್ದರಿಂದ ಸರ್ಕಾರ ಸಂವೇದನಾಶೀಲವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

- Advertisement -

ಬೆಳಗಿನ ಜಾವ ಕಳ್ಳರಂತೆ ಬಂದು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಸುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರತಾಪ್ ಸಿಂಹ,  ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ಮುಂಜಾನೆ ಅಧಿಕಾರಿಗಳು ಕಳ್ಳರಂತೆ ಬಂದು ಜೆಸಿಬಿ, ಹಿಟಾಜಿ ಮೂಲಕ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದಾರೆ. ಎಲ್ಲರೂ ಗಾಢ ನಿದ್ರೆಯಲ್ಲಿರುವ ಸಮಯವನ್ನು ಕಳ್ಳರು ಕಳ್ಳತನಕ್ಕೆ ಸೂಕ್ತ ಸಮಯ ಅಂದುಕೊಳ್ಳುತ್ತಾರೆ. ಅವರಂತೆ ಅಧಿಕಾರಿಗಳು ಮುಂಜಾನೆ ಬಂದು ದೇಗುಲಗಳನ್ನು ತೆರವುಗೊಳಿಸುತ್ತಿದ್ದಾರೆ. ಇದು ಸರಿಯಲ್ಲ, ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ದೇವಸ್ಥಾನಗಳನ್ನು ಉಳಿಸಿ ಜನಾಂದೋಲನವನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಎಚ್ಚರಿಸಿದ ಅವರು ಮಸೀದಿ, ಚರ್ಚ್ ಗಳು ಕಣ್ಣಿಗೆ ಬೀಳುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಅನಧಿಕೃತವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಮೈಸೂರಿಗೆ ಮಾತ್ರ ಸೀಮಿತಗೊಳಿಸಿ ಮಾತನಾಡುತ್ತಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತನಾಡುತ್ತಿದ್ದೇನೆ. ಯಾವುದೇ ಪೂರ್ವಾಪರಗಳನ್ನು ಪರಿಶೀಲಿಸದೇ ಏಕಾಏಕಿ ದೇಗುಲಗಳನ್ನು ನೆಲಸಮಗೊಳಿಸುತ್ತಿರುವುದು ಸರಿಯಲ್ಲ. ಇಂತಹ ಘಟನೆಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ. ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಮುನ್ನಾ ಮೊದಲು ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಬೇಕು ಎಂದು ತಿಳಿಸಿದರು.

ಪ್ರಾರ್ಥನಾ ಮಂದಿರವನ್ನು ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೇ? ಅಥವಾ ಸ್ಥಳಾಂತರ ಮಾಡಲು ಸಾಧ್ಯವಿದೆಯೇ? ಎಂಬೆಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಅಂತಹ ಪ್ರಾರ್ಥನಾ ಮಂದಿರಗಳನ್ನು ಮಾತ್ರ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತೆರವುಗೊಳಿಸಬೇಕೇ ಹೊರತು ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಬಾರದು ಎಂದು ಹೇಳಿದರು.

Join Whatsapp