ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸದೆ ಜಾರಿಕೊಂಡ ಅರುಣ್ ಸಿಂಗ್

Prasthutha|

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಉತ್ತರ ನೀಡದೆ ಜಾರಿಕೊಂಡ ಘಟನೆ ಗುರುವಾರ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಯ ಪಕ್ಷದ ಪದಾಧಿಕಾರಿಗಳ ಸಭೆ ಬಳಿಕ ಅಡುಗೆ ಅನಿಲ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಪೆಟ್ರೋಲ್, ಟೊಮೆಟೊ, ಈರುಳ್ಳಿ ಬಗ್ಗೆ ನಾನು ಮಾತನಾಡುವುದಿಲ್ಲ. ನೀವು ಅರ್ಥಶಾಸ್ತ್ರಜ್ಞರೇ ಅಥವಾ ಆರ್ಬಿಐನವರೇ ಎಂದು ಮರು ಪ್ರಶ್ನೆ ಹಾಕಿದರು.

- Advertisement -


ಅಡುಗೆ ಅನಿಲ, ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಇದನ್ನು ತಗ್ಗಿಸಲು ಏನು ಮಾಡುತ್ತಿದ್ದೀರಿ, ಜನರಿಗೆ ಏನು ಸಂದೇಶ ನೀಡುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ‘ನೋಡಿ ಪ್ರಧಾನಿ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಬಡವರಿಗೆ ಎಲ್ಲ ರೀತಿಯಿಂದಲೂ ನೆರವು ಸಿಗುತ್ತಿದೆ. ಪ್ರತಿ ಮನೆಗಳಿಗೂ ನಲ್ಲಿಯಿಂದ ನೀರು ಪೂರೈಕೆ ಮಾಡುವ ಕೆಲಸ ನಡೀತಿದೆ. ರೈತರ ಖಾತೆಗಳಿಗೆ 6 ಸಾವಿರ ಹಾಕುತ್ತಿದ್ದೇವೆ. ಭಾರತ್ ಮಾಲಾ ಯೋಜನೆಯಡಿ ರಸ್ತೆ ನಿರ್ಮಿಸುತ್ತಿದ್ದೇವೆ ಎಂದು ಹೇಳುವ ಮೂಲಕ ವಿಷಯಾಂತರಕ್ಕೆ ಯತ್ನಿಸಿದರು.


‘ನಾವು ಆ ಬಗ್ಗೆ ಕೇಳುತ್ತಿಲ್ಲ, ಬೆಲೆ ಏರಿಕೆ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಿ’ ಎಂದು ಪತ್ರಕರ್ತರು ಎಂಬ ಮರು ಪ್ರಶ್ನೆ ಹಾಕಿದಾಗ, ‘ಆಯುಷ್ಮಾನ್ ಭಾರತ್ ಜಾರಿ ಆಗಿದೆ. ಎಲ್ಲರಿಗೂ ಹಣ ಬೇಕು. ಎಲ್ಲ ಯೋಜನೆಗಳಿಗೂ ಹಣ ಬೇಕು. ತೆರಿಗೆ ಮೂಲಕ ಹಣ ಬರುತ್ತಾ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಮುಂದೆ ಕಡಿಮೆ ಆಗಬಹುದು. ನೀವು ಮಾಧ್ಯಮದವರು ಚರ್ಚೆ ಮಾಡಬೇಕಾದರೆ ಹಣ ದುಬ್ಬರ ಆಧರಿಸಿ ಚರ್ಚೆ ಮಾಡಬೇಕು. ಒಂದು ಪೆಟ್ರೋಲ್, ಒಂದು ಟೊಮೆಟೊ, ಒಂದು ಈರುಳ್ಳಿ ವಿಚಾರ ಇಟ್ಟುಕೊಂಡು ಚರ್ಚೆ ಮಾಡಬೇಡಿ ಉಚಿತ ಸಲಹೆ ನೀಡಿದರು.



Join Whatsapp