ಹೊಸದಿಲ್ಲಿ: ಟಿ.ಆರ್.ಪಿ (ಟೆಲಿವಿಶನ್ ರೇಟಿಂಗ್ ಪಾಯಿಂಟ್) ಹೆಚ್ಚಿಸುವುದಕ್ಕಾಗಿ ಮಾಡಿದ ವಂಚನೆಗಾಗಿ ರಿಪಬ್ಲಿಕ್ ಟಿ.ವಿ ಒಳಗೊಂಡಂತೆ ಮೂರು ಟಿ.ವಿ ಚಾನೆಲ್ ಗಳ ವಿರುದ್ಧ ತನಿಖೆ ನಡೆಸುತ್ತಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ರೇಟಿಂಗ್ ದಂಧೆಗಾಗಿ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿ.ವಿ ಮತ್ತು ಇತರ ಎರಡು ಚಾನೆಲ್ ಗಳಾದ ‘ಫಕ್ತ್ ಮರಾಠಿ’ ಹಾಗೂ ‘ಬಾಕ್ಸ್ ಸಿನೆಮಾ’ ಪೊಲೀಸರ ಪರಿಶೀಲನೆಯಲ್ಲಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.
ಯಾವ ಟಿ.ವಿ ಚಾನೆಲನ್ನು ಹೆಚ್ಚಾಗಿ ವೀಕ್ಷಿಸಲಾಗುತ್ತದೆ ಎನ್ನುವುದಕ್ಕೆ ಟಿ.ಆರ್.ಪಿ ಒಂದು ಮಾನದಂಡವಾಗಿದೆ. ವೀಕ್ಷಕರ ಆಯ್ಕೆ ಮತ್ತು ಚಾನೆಲ್ ನ ಜನಪ್ರಿಯತೆಯನ್ನೂ ಅದು ತೋರಿಸುತ್ತದೆ.
‘ಹಸ್ನಾ’ ಎಂಬ ಸಂಸ್ಥೆಯು ನಕಲಿ ಟಿ.ಆರ್.ಪಿ ಸೃಷ್ಟಿಗಾಗಿ ಈ ಚಾನೆಲ್ ಗಳಿಗೆ ನೆರವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
“ಟಿ.ಆರ್.ಪಿ ಸೃಷ್ಟಿಗಾಗಿ ಮುಂಬೈಯಲ್ಲಿ ಸುಮಾರು 2000 ಬಾರೋಮೀಟರ್ (ವಾಯುಭಾರಮಾಪನ) ಗಳನ್ನು ಬಳಸಲಾಗುತ್ತಿತ್ತು” ಎಂದು ಸಿಂಗ್ ಹೇಳಿದ್ದಾರೆ.
ಈ ಚಾನೆಲ್ ನ ಪರವಾಗಿ ಕೆಲವರು ಪ್ರತೀ ತಿಂಗಳು ಮನೆಗಳಿಗೆ ಭೇಟಿ ನೀಡಿ ಹಣವನ್ನು ನೀಡುತ್ತಿದ್ದರು. ನಿರಂತರವಾಗಿ ಈ ಚಾನೆಲ್ ಗಳನ್ನು ಬಳಸುವಂತೆ ಜನರೊಂದಿಗೆ ಕೇಳಲಾಗುತ್ತಿತ್ತು.
ಮುಂಬೈ ಪೊಲೀಸರ ಪ್ರಕಾರ, ಈ ದಂಧೆಯ ಭಾಗವಾಗಿ ಪ್ರತೀ ಮನೆಗೆ 400ರಿಂದ 500 ರೂಪಾಯಿ ನೀಡಲಾಗುತ್ತಿತ್ತು.
“ತಮಗೆ ಹಣ ದೊರೆಯುತ್ತಿದೆಯೆಂದು ಹಲವು ನಿವಾಸಿಗಳು ಹೇಳಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಟಿ.ಆರ್.ಪಿ ದಂಧೆಯನ್ನು ಪತ್ತೆಹಚ್ಚಿದ ಮುಂಬೈ ಅಪರಾಧ ಪತ್ತೆದಳದ ಪೊಲೀಸರು ಇಬ್ಬರು ಮರಾಠಿ ಚಾನೆಲ್ ಗಳ ಮಾಲಕರನ್ನು ಬಂಧಿಸಿದ್ದಾರೆ. ರಿಪಬ್ಲಿಕ್ ಟಿ.ವಿ ಚಾನೆಲ್ ಗೆ ಸಮನ್ಸ್ ಕಳುಹಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ.