ಬೆಂಗಳೂರು:ಉನ್ನತ ಶಿಕ್ಷಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಕ್ಟೋಬರ್ ಒಂದರಿಂದ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಬಳಿಯ ಹೆಲಿಪ್ಯಾಡ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಅಧ್ಯಯನಕ್ಕಾಗಿ ಸಮಿತಿ, ಜಾರಿಗೊಳಿಸುವುದಕ್ಕೆ ಕಾರ್ಯಪಡೆ ರಚಿಸಲಾಗಿದ್ದು, ಅದನ್ನು ಆಧರಿಸಿ ರಾಜ್ಯ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ ಎಂದರು.
ಬಾಕಿ ಇರುವ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ, ಕಾಲಮಿತಿಯೊಳಗೆ ಪೂರ್ಣಗೊಳಿಸಲು ಒತ್ತು ನೀಡಲಾಗುತ್ತಿದೆ ಎಂದರು. ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶ ಇರುವುದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ಅವುಗಳನ್ನು ಜನಪ್ರಿಯಗೊಳಿಸುವ ಕಾರ್ಯಕ್ಕೂ ಸರ್ಕಾರ ಆದ್ಯತೆ ನೀಡಲಿದೆ ಎಂದರು.
ಕೊರೋನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಇದೇ 30ರಂದು ತಜ್ಞರ ಸಮಿತಿ ಸಭೆ ನಡೆಯಲಿದೆ. ಅದರ ಆಧಾರದ ಮೇಲೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.