ನಾಗ್ಪುರ: ಪೈಲಟ್ ಗೆ ಹೃದಯಾಘಾತ ಸಂಭವಿಸಿದ ಕಾರಣ, ಬಾಂಗ್ಲಾದೇಶದ ‘ಬಿಮನ್ ಏರ್ಲೈನ್ಸ್’ನ ವಿಮಾನ ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಸುಮಾರು 11 ಗಂಟೆಗಳ ನಂತರ ತನ್ನ ಸಂಚಾರವನ್ನು ಪುನರಾರಂಭಿಸಿತು.
ಮಸ್ಕತ್ ನಿಂದ ಢಾಕಾಗೆ 126 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಬಾಂಗ್ಲಾದೇಶ ವಿಮಾನದ ಪೈಲಟ್ ಗೆ ದಾರಿ ಮಧ್ಯೆ ಹೃದಯಾಘಾತವಾಯಿತು. ಹಾಗಾಗಿ ಶುಕ್ರವಾರ ಬೆಳಿಗ್ಗೆ ಸುಮಾರು 11.40ರ ಸುಮಾರಿಗೆ ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.
ಬಾಂಗ್ಲಾದೇಶದ ಬಿಮಾನ್ ಏರ್ಲೈನ್ಸ್ ಸಂಸ್ಥೆ ಪರ್ಯಾಯ ಸಿಬ್ಬಂದಿ ವ್ಯವಸ್ಥೆ ಮಾಡಿದ ನಂತರ, ವಿಮಾನವು ಶುಕ್ರವಾರ ರಾತ್ರಿ 10.37ಕ್ಕೆ ಪ್ರಯಾಣಿಕರೊಂದಿಗೆ ಢಾಕಾದತ್ತ ಹೊರಟಿತು ಎಂದು ನಾಗಪುರ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.