ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಭಯಾನಕತೆಯನ್ನು ಹೊರಹಾಕಿದ ಸಂತ್ರಸ್ತೆಯ ಸಹಪಾಠಿ

Prasthutha|

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡ ಸಂತ್ರಸ್ತೆಯ ಸಹಪಾಠಿಯ ಹೇಳಿಕೆಯನ್ನು ದಾಖಲಿಸಿದೆಯೆಂದು ಪೊಲೀಸ್ ಮೂಲಗಳು ಶುಕ್ರವಾರ ತಿಳಿಸಿವೆ. ಈ ಜೋಡಿ ಆಗಸ್ಟ್ 24 ರಂದು ಅನುಭವಿಸಿದ ಭಯಾನಕತೆಯನ್ನು ಆತ ಪೊಲೀಸರಲ್ಲಿ ವಿವರಿಸಿದ್ದಾನೆ.

- Advertisement -

ಅಂದು ನಾವು ತೆರಳಿದ್ದ ಸ್ಥಳವು ದುಷ್ಕರ್ಮಿಗಳಿಗೆ ಪರಿಚಿತವಾಗಿದ್ದು, ಅವರೆಲ್ಲರೂ ಆ ಜಾಗದಲ್ಲಿ ಪ್ರತಿದಿನ ಜಾಗಿಂಗ್ ಮಾಡುತ್ತಿದ್ದರು ಎಂದು ಆತ ಹೇಳಿದ್ದಾನೆ. ಎಲ್ಲಾ ಆರೋಪಿಗಳು 25 – 30 ಪ್ರಾಯದವರೆಂದು ಆತ ಪೊಲೀಸರಿಗೆ ಮಾಹಿತಿ ನೀಡಿರುತ್ತಾನೆ.

ತರಗತಿ ಮುಗಿಸಿದ ನಂತರ ಸಂಜೆ ಸರಿಸುಮಾರು 7.30 ಕ್ಕೆ ನಾವು ಬೈಕಿನಲ್ಲಿ ತೆರಳುತ್ತಿದ್ದೆವು. ಜೆ.ಎಸ್.ಎಸ್ ಆಯುರ್ವೇದಿಕ್ ಕಾಲೇಜು ರಸ್ತೆಯಿಂದ ಮುಂದೆ ಸಾಗಿ ವಾಟರ್ ಟ್ಯಾಂಕ್ ರಸ್ತೆಯನ್ನು ದಾಟಿ ಘಟನಾ ಸ್ಥಳವನ್ನು ತಲುಪಿದೆವು. ಈ ಸಂದರ್ಭದಲ್ಲಿ ಆರು ಜನ ದುಷ್ಕರ್ಮಿಗಳು ನಮ್ಮನ್ನು ಸುತ್ತಿವರಿದರು. ನಂತರ ಅವರು ನನಗೆ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆಯಲಾರಂಭಿಸಿದರು. ಈ ಹಲ್ಲೆಯಿಂದ ನಾನು ಪ್ರಜ್ಞಾಹೀನನಾಗಿದ್ದೆ ಎಂದು ಆತ ಪೊಲೀಸರಲ್ಲಿ ತಿಳಿಸಿದ್ದಾರೆ.

- Advertisement -

ಘಟನೆಯಿಂದ ಎಚ್ಚರವಾದಾಗ ನನ್ನನ್ನು ನಾಲ್ಕು ಮಂದಿ ಸುತ್ತುವರಿದಿದ್ದರು. ನನ್ನ ಗೆಳತಿಯ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಅವರಲ್ಲಿ ಇಬ್ಬರು ಪೊದೆಯಿಂದ ಆಕೆಯನ್ನು ಎಳೆದುತಂದು ನನ್ನ ಪಕ್ಕದಲ್ಲಿ ಮಲಗಿಸಿದರು. ಈ ಸಂದರ್ಭದಲ್ಲಿ ಆಕೆ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಮಾತ್ರವಲ್ಲದೆ ನನ್ನ ಪೋಷಕರಿಗೆ ಕರೆಮಾಡಿ ನಮ್ಮಿಬ್ಬರನ್ನು ಬಿಡುಗಡೆಗೊಳಿಸಲು 3 ಲಕ್ಷ ನಗದಿನ ಬೇಡಿಕೆಯಿಟ್ಟಿದ್ದಾರೆ. ಅತ್ಯಾಚಾರ ಸಂದರ್ಭದಲ್ಲಿ ವೀಡಿಯೋ ಮಾಡಿರುವ ಮಾಹಿತಿ ನೀಡಿರುವ ದುಷ್ಕರ್ಮಿಗಳು, ವೀಡಿಯೋವನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಲ್ಲಿ ತಿಳಿಸಿದ್ದಾನೆ.

ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ರಾದ ಪ್ರವೀಣ್ ಸೂದ್ ಅವರಿಗೆ ತನಿಖೆಯನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿಶೇಷ ತಂಡದ ಉಸ್ತುವಾರಿ ಹೊತ್ತಿರುವ ಹೆಚ್ಚುವರಿ ಡಿಜಿಪಿ ಪ್ರತಾಪ್ ರೆಡ್ಡಿ ಅವರು ಸಾಮೂಹಿಕ ಅತ್ಯಾಚಾರ ಘಟನೆ ಪೊಲೀಸರಿಗೆ ಸವಾಲಿನ ಪ್ರಕರಣವಾಗಿದೆಯೆಂದು ತಿಳಿಸಿದರು. ಸಂತ್ರಸ್ತೆಯ ಹೇಳಿಕೆ ಪಡೆಯದ ಹೊರತು ಈ ಪ್ರಕರಣ ಜಟಿಲಗೊಳ್ಳುತ್ತಿದೆಯೆಂದು ಅವರು ತಿಳಿಸಿದರು. ಐಪಿಸಿ ಸೆಕ್ಷನ್ 376 ಡಿ, 397 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಭೇಧಿಸಲು ಐದು ತಂಡಗಳನ್ನು ರಚಿಸಲಾಗಿದೆ. ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಇತರ ಜಿಲ್ಲೆಗಳಿಂದ ನುರಿತ ಅಧಿಕಾರಿಗಳನ್ನು ಕರೆಸಲಾಗಿದ್ದು, ಻ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದೆಂದು ತಿಳಿಸಿದರು.



Join Whatsapp