ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಗತಿಪರರ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಠಡಿ ಬಾಗಿಲಿಗೆ ಕಾಂಗ್ರೆಸ್ ಕಾರ್ಯಕರ್ತರು ಬಿನ್ ಲಾದೆನ್ ಚಿತ್ರವಿರುವ ಭಿತ್ತಿಪತ್ರ ಅಂಟಿಸುವ ಮೂಲಕ ಪ್ರತಿಭಟಿಸಿದರು.
ಶಾಸಕರ ಭವನದಲ್ಲಿ ಇರುವ ಶಾಸಕ ಯತ್ನಾಳ್ ಕೊಠಡಿಗೆ ಯತ್ನಾಳ್ ವಿರುದ್ಧ ಬರಹಗಳುಳ್ಳ ಹಾಗೂ ಲಾದೆನ್ ಹೋಲುವ ಯತ್ನಾಳ್ ಭಿತ್ತಿಪತ್ರವನ್ನು ಅಂಟಿಸಿದರು.
ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಯತ್ನಾಳ್ ಅವರು ಕಾಂಗ್ರೆಸ್ ಪಕ್ಷ ಮತ್ತು ಸಮಾಜದ ಹಿರಿಯರ ಬಗ್ಗೆ ಅತ್ಯಂತ ಕೆಟ್ಟ ಪದಗಳಿಂದ ಅವಮಾನ ಮಾಡಿದ್ದು, ಅವರನ್ನು ಗಡಿಪಾರು ಮಾಡಬೇಕು ಎಂದು ಮನವಿ ಮಾಡಿದರು.