ಅಫ್ಘಾನಿಸ್ತಾನ ಬೆಳವಣಿಗೆ ಪ್ರತಿಯೊಬ್ಬರಿಗೂ ಪಾಠ: ಎಂ.ವೆಂಕಯ್ಯನಾಯ್ಡು

Prasthutha|

ಬೆಂಗಳೂರು: ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಬೆಳವಣಿಗೆ ಪ್ರತಿಯೊಬ್ಬರಿಗೂ ಪಾಠವಾಗಿದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

- Advertisement -

ನಾವು ಶಾಂತಿಗಾಗಿ ಭದ್ರತೆಯನ್ನು ಬಯಸುತ್ತೇವೆ. ಇದು ನಮ್ಮ ಭಾರತದ ತತ್ವಶಾಸ್ತ್ರ. ಸ್ವಯಂ ರಕ್ಷಣೆ ಭಾರತದ ಪ್ರಮುಖ ಅಸ್ತ್ರವಾಗಿದೆ. ಶಾಂತಿ ಕಾಪಾಡಲು ಭದ್ರತೆ ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಇಂದು ಬೆಂಗಳೂರಿನ ಎಚ್ ಎ ಎಲ್ ಗೆ ಭೇಟಿ ನೀಡಿ, ಅಲ್ಲಿನ ವಿವಿಧ ಘಟಕಗಳ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು.
ಬಳಿಕ ಎಚ್ಎಎಲ್ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಭಾರತ ತನ್ನ ಇತಿಹಾಸದಲ್ಲಿ ಯಾವುದೇ ರಾಷ್ಟ್ರದ ಮೇಲೂ ದಾಳಿ ಮಾಡಿಲ್ಲ . ಆದರೆ ನಮ್ಮ ರಕ್ಷಣೆಗೆ ಸಶಸ್ತ್ರ ಪಡೆಗಳನ್ನು ಅತ್ಯಂತ ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದರು.

- Advertisement -

ನಮ್ಮ ಮೇಲಿನ ದಾಳಿಗೆ ಯಾವುದೇ ಸಂದರ್ಭದಲ್ಲೂ ಪ್ರತ್ಯುತ್ತರ ನೀಡಲು ದೇಶ ಸನ್ನದ್ಧವಾಗಿದೆ. ಸಮರ್ಥ, ಸಶಕ್ತ ಭಾರತ ನಿರ್ಮಾಣಕ್ಕಾಗಿ ರಕ್ಷಣಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಭಾರತ ಇಂದು ರಕ್ಷಣಾ ಕ್ಷೇತ್ರದ ಉತ್ಪಾದನೆಯಲ್ಲಿ ಮಹತ್ವದ ರಾಷ್ಟ್ರವಾಗಿ ಹೊರಹೊಮ್ಮಿದೆ. ಉಪಗ್ರಹಗಳನ್ನು ಉಡಾವಣೆ ಮಾಡುವ ವಾಹನಗಳು, ಕ್ಷಿಪಣಿಗಳು, ಯುದ್ಧ ವಿಮಾನಗಳನ್ನು ಉತ್ಪಾದಿಸುತ್ತಿದೆ. ಸಂಕೀರ್ಣದಾಯಕ ತಂತ್ರಜ್ಞಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಚ್ಎಎಲ್ ಮೇಲಿದೆ ಎಂದು ಹೇಳಿದರು.

2030ರ ವೇಳೆಗೆ ಈ ವಲಯದಲ್ಲಿ 70 ಶತಕೋಟಿ ಡಾಲರ್ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ. ಕರ್ನಾಟಕ ಏರೋ ಸ್ಪೇಸ್ ವಲಯದಲ್ಲಿ ಪ್ರಮುಖ ಕೇಂದ್ರವಾಗುವತ್ತ ದಾಪುಗಾಲು ಇಟ್ಟಿದೆ ಎಂದು ಹೇಳಿದರು.

ಇಂದು ನಾನು ಪ್ರಪ್ರಥಮ ಬಾರಿಗೆ ಹೆಚ್.ಎ.ಎಲ್.ಗೆ ಭೇಟಿ ನೀಡುತ್ತಿದ್ದು ಇಲ್ಲಿನ ವ್ಯವಸ್ಥೆಯನ್ನು ನೋಡಿ ತುಂಬಾ ಸಂತಸವಾಗಿದೆ. ಏರೋಸ್ಪೇಸ್ ನ್ನು ರಕ್ಷಣೆಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಳೆದ 8 ವರ್ಷಗಳಿಂದ ಹೆಚ್.ಎ.ಎಲ್. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರಕ್ಷಣಾ ವಲಯಕ್ಕೆ ಬೇಕಾಗುವ ಯುದ್ಧ ವಿಮಾನಗಳು ಹಗುರವಾದ ಹೆಲಿಕ್ಯಾಪ್ಟರ್ ಗಳ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿನ ವಿಜ್ಞಾನಿಗಳು, ಅಧಿಕಾರಿಗಳು, ತಂತ್ರಜ್ಞರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ನಾವು ಯಾವುದೇ ರಾಷ್ಟ್ರಕ್ಕೂ ಕಡಿಮೆ ಇಲ್ಲ. ನಾವು ವಿಜ್ಞಾನ ಹಾಗೂ ತಂತ್ರಜ್ಞಾದಲ್ಲಿ ಮುಂಚೂಣಿಯಲ್ಲಿದ್ದು, ಇತರ ರಾಷ್ಷ್ರಗಳೊಂದಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದೇವೆ. ಇಂದಲ್ಲ ನಾಳೆ ನಾವು ರಕ್ಷಣಾ ಉಪಕರಣಗಳನ್ನು ರಪ್ತು ಮಾಡುವ ಪ್ರಮುಖ ದೇಶವಾಗಿ ಮುಂದುವರೆಯುತ್ತೇವೆ ಎಂದರು.

ನಾವು ಸ್ಪರ್ಧಾತ್ಮಕ ಉತ್ಪನ್ನಗಳನ್ನು ತಯಾರಿಸಲು ಹೆಚ್ಚು ಒತ್ತು ನೀಡಬೇಕು. ಎಂ.ಎಸ್.ಎಂ.ಇಗಳನ್ನು ಉತ್ತೇಜಿಸಬೇಕು. ಇದನ್ನು ಹೆಚ್.ಎ.ಎಲ್ ಸಂಸ್ಥೆ ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕು. ಈಗಾಗಲೇ ಸಂಸ್ಥೆಯು ತೇಜಸ್ ಹಗುರ ವಿಮಾನ ನಿರ್ಮಾಣ ಮಾಡುತ್ತಿರುವುದು ಸಂತೋಷ ತಂದಿದೆ. 83 ಹೊಸ ಸ್ವದೇಶಿ ಲಘು ಯುದ್ಧ ವಿಮಾನ ತೇಜಸ್ ಎಂಕೆ 1 ಎ ತಯಾರಿಸಲು ಭಾರತೀಯ ವಾಯುಪಡೆಯಿಂದ ಎಚ್ಎಎಲ್ ಆದೇಶ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.

ಡಿ.ಆರ್.ಡಿ.ಓ ವಿಮಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇದು ಉತ್ತಮವಾದ ಕೆಲಸ. ಆರ್ಥಿಕತೆಗೆ ಒತ್ತು ನೀಡಿ, ಉತ್ಪಾದನಾ ಉದ್ಯಮವನ್ನು ನಾವು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಉಪ ರಾಷ್ಟ್ರಪತಿಗಳು ತಿಳಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ಎಚ್ ಎಎಲ್ ಭಾರತೀಯ ವಾಯುಪಡೆಗೆ ಅತ್ಯಂತ ಪ್ರಮುಖ ಸಂಸ್ಥೆಯಾಗಿದ್ದು, ತೇಜಸ್ ಎಂ.ಕೆ. ಸರಣಿಯ ವಿಮಾನ ನಿರ್ಮಾಣಕ್ಕೆ ವಾಯುಪಡೆ ಎಚ್ ಎಎಲ್ ಅನುಮತಿ ನೀಡಿದೆ. ಇದು ಮಹತ್ವದ ಬೆಳವಣಿಗೆಯಾಗಿದೆ. ಎಚ್ಎಎಲ್ ದೇಶದ ಗೌರವ ಹೆಚ್ಚಿಸಲು ಎಲ್ಲ ರೀತಿಯಲ್ಲೂ ಶ್ರಮಿಸಲಿದೆ ಎಂದರು.



Join Whatsapp