ಭಾರತ-ಸೌದಿ ವಿಮಾನ ಯಾನ ಸಹಜ ಸ್ಥಿತಿಗೆ ತರಲು ಐ.ಎಸ್.ಎಫ್ ಒತ್ತಾಯ

Prasthutha|

ಜಿದ್ದಾ: ಕೋವಿಡ್ ಬಿಕ್ಕಟ್ಟಿನಿಂದಾಗಿ ಜಾರಿಗೊಳಿಸಿರುವ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿಲುಕಿಕೊಂಡಿರುವ ಅನಿವಾಸಿಗರು ಸುಲಭವಾಗಿ ಸೌದಿ ಅರೇಬಿಯಾಕ್ಕೆ ಮರಳಲು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಭಾರತ ಸರಕಾರ ರಾಜತಾಂತ್ರಿಕ ಪ್ರಯತ್ನಗಳನ್ನು ಪ್ರಾರಂಭಿಸಬೇಕೆಂದು ಇಂಡಿಯನ್ ಸೋಶಿಯಲ್ ಫೋರಂ ಆಗ್ರಹಿಸಿದೆ.

- Advertisement -


ಫೋರಂನ ನಾಯಕರು ಈಗಾಗಲೇ ಈ ಕುರಿತು ಭಾರತೀಯ ಪ್ರಧಾನ ರಾಯಭಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕೋವಿಡ್ ಬಿಕ್ಕಟ್ಟು ಪ್ರಾರಂಭವಾಗುವುದಕ್ಕೆ ಮುಂಚೆ ಹಾಗೂ ಬಿಕ್ಕಟ್ಟು ಆರಂಭವಾದ ನಂತರ ಹಲವು ಕಾರಣಗಳಿಂದ ಭಾರತಕ್ಕೆ ಮರಳಿದ ಅನಿವಾಸಿ ಭಾರತೀಯರು ತವರಿನಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನು ಹಲವರು ತವರಿಗೆ ಹೋದರೆ ಮತ್ತೆ ಸೌದಿಗೆ ಮರಳ ಲು ಕಷ್ಟವಾಗಬಹುದೆಂಬ ಭಯದಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಭಾರತ-ಸೌದಿ ಅರೇಬಿಯಾ ವಿಮಾನ ಯಾನ ಸಹಜ ಸ್ಥಿತಿಗೆ ತರುವ ಮೂಲಕ ಅನಿವಾಸಿಗರನ್ನು ಸಂಕಷ್ಟದಿಂದ ಪಾರುಗೊಳಿಸಬೇಕೆಂದು ಐ.ಎಸ್.ಎಫ್ ಭಾರತ ಸರಕಾರವನ್ನು ಒತ್ತಾಯಿಸುತ್ತದೆ.


ಕೋವಿಡ್ ಬಿಕ್ಕಟ್ಟು ಪ್ರಾರಂಭವಾದಾಗ ಸೌದಿ ಅರೇಬಿಯಾದಲ್ಲಿ ಕಂಪೆನಿಗಳು ನಷ್ಟವನ್ನು ನಿಯಂತ್ರಿಸುವ ಸಲುವಾಗಿ ಕಾರ್ಮಿಕರನ್ನು ಉದ್ಯೋಗದಿಂದ ತೆಗೆದು ಹಾಕುವ, ದೀರ್ಘ ರಜೆಯಲ್ಲಿ ಕಳುಹಿಸುವ, ವೇತನ ಕಡಿತಗೊಳಿಸುವಂತಹ ಕ್ರಮಗಳನ್ನು ಕೈಗೊಂಡಿದ್ದವು. ಈ ಬಿಕ್ಕಟ್ಟಿನ ಅವಧಿಯಲ್ಲಿ ಹಲವು ಅನಿವಾಸಿ ಕಾರ್ಮಿಕರು ತವರಿಗೆ ಮರಳಿದ್ದರು.

- Advertisement -


ಕಮಿಶನ್ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡುವವರು, ದೀರ್ಘಾವಧಿ ಕಾಯಿಲೆಗೆ ನಿಯಮಿತವಾಗಿ ಚಿಕಿತ್ಸೆಯ ಅಗತ್ಯವಿರುವವರು ಈ ಅವಧಿಯಲ್ಲಿ ವಂದೇ ಭಾರತ್ ಮಿಶನ್ ಹಾಗೂ ಚಾರ್ಟೆಡ್ ವಿಮಾನಗಳ ಮೂಲಕ ತವರು ಸೇರಿದ್ದರು. ಹಲವರು ಕೋವಿಡ್ ಗೆ ಭಯಪಟ್ಟು ತವರಿಗೆ ಹಿಂದಿರುಗಿದ್ದರು. ಶೀಘ್ರದಲ್ಲೇ ಜಾಗತಿಕ ಆರೋಗ್ಯ ಬಿಕ್ಕಟ್ಟು ಸರಿಯಾಗಲಿದ್ದು ಸಹಜ ಸ್ಥಿತಿ ಮರುಕಳಿಸಿದಾಗ ಸೌದಿ ಅರೇಬಿಯಾಕ್ಕೆ ಮರಳಬಹುದೆಂದು ಈ ಅನಿವಾಸಿಗರು ಭಾವಿಸಿದ್ದರು.


ಆದರೆ ಪರಿಸ್ಥಿತಿ ಭಿನ್ನವಾಗಿದ್ದು ಕಳೆದ ಒಂದೂವರೆ ವರ್ಷದಿಂದ ಭಾರತ- ಸೌದಿ ಅರೇಬಿಯಾ ವಿಮಾನ ಯಾನ ಸಹಜ ಸ್ಥಿತಿಗೆ ಮರಳಲೇ ಇಲ್ಲ. ಕೋವಿಡ್ ನಿಂದಾಗಿ ಭಾರತದಲ್ಲೂ ಆರ್ಥಿಕ ಪರಿಸ್ಥಿತಿ ಕುಸಿದಿರುವುದರಿಂದ ಅನಿವಾಸಿಗಳು ತವರಿನಲ್ಲಿ ಉದ್ಯೋಗ ವಿಲ್ಲದೆ, ಸೌದಿ ಅರೇಬಿಯಾಕ್ಕೂ ಮರಳಲಾಗದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಭಾರತದಿಂದ ಬರುವವರು 14 ದಿನಗಳ ಕಾಲ ತೃತೀಯ ರಾಷ್ಟ್ರಗಳಲ್ಲಿ ತಂಗಿ ಸೌದಿ ಅರೇಬಿಯಾಕ್ಕೆ ಬರಬೇಕಾಗಿದ್ದು ಇದು ಅತ್ಯಂತ ದುಬಾರಿಯಾಗಿದೆ. ಸಾಲ-ಸೋಲ ಮಾಡಿ ದುಬೈ, ಒಮಾನ್ ಗಳಂತಹ ರಾಷ್ಟ್ರಗಳಲ್ಲಿ ತಂಗಿ ಸೌದಿ ಅರೇಬಿಯಾಕ್ಕೆ ಹೊರಡುವ ವೇಳೆ ತಟ್ಟನೆ ಈ ರಾಷ್ಟ್ರಗಳ ವಿಮಾನ ವ್ಯವಸ್ಥೆ ಸ್ಥಗಿತಗೊಂಡಾಗ ದಾರಿ ಕಾಣದೆ ಮತ್ತೆ ಭಾರತಕ್ಕೆ ಮರಳಿ ತೀವ್ರ ನಷ್ಟವೆದುರಿಸಿದ ಅದೆಷ್ಟೋ ಅನಿವಾಸಿ ಭಾರತೀಯರೂ ಇದ್ದಾರೆ. ಸರಕಾರ ಕೊರೋನಾ ಅವಧಿಯಲ್ಲಿ ಕಾರ್ಮಿಕರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಪರಿಹಾರ ಪ್ಯಾಕೇಜ್ ಗಳನ್ನು ಘೋಷಿಸಿದಂತೆ ಸಂಕಷ್ಟಕ್ಕೀಡಾಗಿರುವ ಅನಿವಾಸಿಗಳಿಗಾಗಿ ಪರಿಹಾರ ಒದಗಿಸಬೇಕೆಂದು ಐ.ಎಸ್.ಎಫ್ ಒತ್ತಾಯಿಸುತ್ತದೆ.


ಅನಿವಾಸಿಗಳ ಸಮಸ್ಯೆಗಳನ್ನು ಮನಗಂಡು ಭಾರತ ಸರಕಾರ ಕೂಡಲೇ ಭಾರತ-ಸೌದಿ ಅರೇಬಿಯಾ ವಿಮಾನಯಾನವನ್ನು ಸಹಜಗೊಳಿಸಲು ರಾಯಭಾರಿ ಪ್ರಯತ್ನವನ್ನು ಆರಂಭಿಸಬೇಕು. ಕೋವಿಡ್ 19 ಬಿಕ್ಕಟ್ಟಿನ ಮಧ್ಯೆ ಎರಡು ರಾಷ್ಟ್ರಗಳ ಮಧ್ಯೆ ಪ್ರಯಾಣ ಅನುಮೋದಿಸುವ ‘ಏರ್ ಬಬಲ್’ ವ್ಯವಸ್ಥೆಗೆ ಚಾಲನೆ ನೀಡಿರುವ ಭಾರತ, ಸೌದಿ ಅರೇಬಿಯಾದ ಜೊತೆಗೂ ಈ ಒಪ್ಪಂದವನ್ನು ಮಾಡಿಕೊಳ್ಳಬೇಕು. ಬಹ್ರೈನ್, ಇರಾಕ್, ಕುವೈಟ್, ಒಮಾನ್, ಕತಾರ್ ಮತ್ತು ಯು.ಎ.ಇ ಸೇರಿದಂತೆ 28 ರಾಷ್ಟ್ರಗಳೊಂದಿಗೆ ಏರ್ ಬಬಲ್ ವ್ಯವಸ್ಥೆಯನ್ನು ಹೊಂದಿದ್ದರೂ ಸೌದಿ ಅರೇಬಿಯಾದ ಜೊತೆ ಇದು ಚಾಲನೆಗೊಂಡಿಲ್ಲ. ಭಾರತದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾದ ಕಾರಣ ಸೌದಿ ಅರೇಬಿಯಾದ ಜೊತೆ ಈ ಕುರಿತ ಮಾತುಕತೆಗಳು ವಿಫಲವಾಗಿದ್ದವು. ಇದೀಗ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ‘ ಏರ್ ಬಬಲ್’ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾದ ಜೊತೆ ಮಾತುಕತೆಯನ್ನು ಭಾರತ ಸರಕಾರ ಮುಂದುವರಿಸಬೇಕು ಎಂದು ಐ.ಎಸ್.ಎಫ್ ಒತ್ತಾಯಿಸುತ್ತದೆ.

ಸೌದಿ ಅರೇಬಿಯಾ 2.6 ದಶಲಕ್ಷ ಭಾರತೀಯರಿಗೆ ತವರಾಗಿದ್ದು ಅವರಲ್ಲಿ ಪಶ್ಚಿಮ ಏಶ್ಯಾದಲ್ಲಿ ಅತ್ಯಧಿಕ ಭಾರತೀಯ ಅನಿವಾಸಿಗಳಿರುವ ಸ್ಥಳವಾಗಿದೆ. ಭಾರತದ ವಿದೇಶಿ ವಿನಿಮಯಕ್ಕೆ ಸೌದಿ ಅರೇಬಿಯಾದಲ್ಲಿರುವ ಅನಿವಾಸಿಗಳ ಪಾಲು ಅಗಾಧವಿರುವುದರಿಂದ ದೇಶದ ಆರ್ಥಿಕತೆಗೂ ಇದು ನೆರವುಂಟುಮಾಡಲಿದೆ. ಅಲ್ಲದೆ ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯ ಸಂಘಟನೆಗಳು ಮತ್ತು ದೇಶದಲ್ಲಿ ರುವ ಸಾಮಾಜಿಕ ಸಂಘಟನೆಗಳು ಕೂಡ ಈ ಕುರಿತು ಸರಕಾರಕ್ಕೆ ಒತ್ತಡ ಹೇರಬೇಕೆಂದು ಐ.ಎಸ್.ಎಫ್ ಮನವಿ ಮಾಡಿದೆ.



Join Whatsapp