ಲಕ್ನೋ: ತಾಲಿಬಾನಿಗರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸುವಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಸಮಾಜವಾದಿ ಪಕ್ಷದ ಸಂಸದ ಮತ್ತು ಇತರ ಇಬ್ಬರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ.
“ತಾಲಿಬಾನ್ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ ಶಫಿಕುರ್ರಹ್ಮಾನ್ ಬರ್ಕ್ ಮತ್ತು ಇತರ ಇಬ್ಬರ ವಿರುದ್ಧ ನಿನ್ನೆ ತಡರಾತ್ರಿ ಪ್ರಕರಣ ದಾಖಲಾಗಿದೆ. ಆರೋಪಿಗಳು, ತಾಲಿಬಾನ್ ಅನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ ಮತ್ತು ತಾಲಿಬಾನ್ ವಿಜಯವನ್ನು ಆಚರಿಸಿದ್ದಾರೆ” ಎಂದು ಚಂಬಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಚಾರ್ಖೇಶ್ ಮಿಶ್ರಾ ತಿಳಿಸಿದ್ದಾರೆ.
“ಭಾರತೀಯ ಸರ್ಕಾರದ ಪ್ರಕಾರ ತಾಲಿಬಾನ್ ಭಯೋತ್ಪಾದಕ ಸಂಘಟನೆಯಾಗಿದೆ. ಆರೋಪಿಗಳ ಹೇಳಿಕೆಯು ದೇಶದ್ರೋಹವೆಂದು ಪರಿಗಣಿಸಬಹುದು. ಆದ್ದರಿಂದ ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದು ಅವರು ಹೇಳಿದರು.
ತಾಲಿಬಾನಿಗರು “ಅಫ್ಘಾನಿಸ್ತಾನ ಮುಕ್ತವಾಗಬೇಕೆಂದು ಬಯಸುತ್ತಾರೆ” ಮತ್ತು “ತಮ್ಮದೇ ದೇಶದ ಆಡಳಿತ ನಡೆಸಲು ಬಯಸುತ್ತಾರೆ” ಎಂದು ಸೋಮವಾರ ಸಂಭಾಲ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಶಫೀಕುಲ್ ಬರ್ಕ್ ಸುದ್ದಿಗಾರರಿಗೆ ತಿಳಿಸಿದರು. ತಾಲಿಬಾನ್ ಅನ್ನು ‘ರಷ್ಯಾ ಅಥವಾ ಅಮೆರಿಕವನ್ನು ಅಫ್ಘಾನಿಸ್ತಾನದಲ್ಲಿ ಇರಲು ಅನುಮತಿಸದ ಶಕ್ತಿ’, ಈ ಗುಂಪಿನ ಕ್ರಮಗಳು ‘ಆಂತರಿಕ ವಿಷಯ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದರು.