ಲಕ್ನೋ: ಅನಧಿಕೃತ ವ್ಯಕ್ತಿಗಳು ಸೆರೆಮನೆಗೆ ಬರುತ್ತಾರೆ. ನನ್ನನ್ನು ಮುಗಿಸಲು ಒಂದು ತಂಡಕ್ಕೆ ಐದು ಕೋಟಿ ರೂಪಾಯಿ ಸುಪಾರಿ ನೀಡಿರುವುದಾಗಿ ವರದಿ ಇದೆ, ಇದರಿಂದ ಜೈಲಿನಲ್ಲಿ ನನ್ನ ಜೀವಕ್ಕೆ ಅಪಾಯವಿದೆ ಎಂದು ಜೈಲು ಸೇರಿರುವ ಬಹುಜನ ಸಮಾಜ ಪಕ್ಷದ ಶಾಸಕ ಮುಕ್ತಾರ್ ಅನ್ಸಾರಿ ಕೋರ್ಟಿಗೆ ತಿಳಿಸಿದ್ದಾರೆ.
ಅನಧಿಕೃತ ವ್ಯಕ್ತಿಗಳು ಜೈಲೊಳಕ್ಕೆ ಬರುವಾಗ ಅವರ ಮಾಹಿತಿ ದಾಖಲಿಸುತ್ತಿಲ್ಲ ಎಂದು ಅವರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಅನ್ಸಾರಿಯವರನ್ನು ಉತ್ತರ ಪ್ರದೇಶದ ಬಂಡಾ ಜೈಲಲ್ಲಿ ಇಡಲಾಗಿದ್ದು, ಅವರು ದಿಟಸಮ (ವರ್ಚ್ಯುವಲ್) ವಿಚಾರಣೆಗೆ ವಿಶೇಷ ಕೋರ್ಟಿನ ನ್ಯಾಯಾಧೀಶೆ ಮೌಸಮಿ ಮಾದೇಶಿ ಅವರೆದುರು ಹಾಜರಾದರು.
ಪಂಜಾಬಿನಲ್ಲಿ ನಡೆದಿದ್ದ ಸುಲಿಗೆ ಪ್ರಕರಣವೊಂದರ ಸಂಬಂಧ ಬಾರಾಬಂಕಿ ರಿಜಿಸ್ಟ್ರೇಶನ್ ಇರುವ ಬುಲೆಟ್ ಪ್ರೂಫ್ ಆಂಬುಲೆನ್ಸ್ ನಲ್ಲಿ ಅನ್ಸಾರಿ ಅವರನ್ನು ರೋಪರ್ ಜೈಲಿನಿಂದ ಮೊಹಾಲಿ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಬಳಿಕ ಫೋರ್ಜರಿ ಮತ್ತು ವಂಚನೆ ಪ್ರಕರಣವನ್ನು ಸಹ ಅನ್ಸಾರಿ ವಿರುದ್ಧ ದಾಖಲಿಸಲಾಗಿದೆ.
5 ಕೋಟಿ ರೂಪಾಯಿ ಸುಪಾರಿ ಪಡೆದ ಗುಂಪು ಅನ್ಸಾರಿಯವರನ್ನು ಕೊಲ್ಲಲು ಓಡಾಡುತ್ತಿದೆ ಎಂದು ಅನ್ಸಾರಿ ವಕೀಲ ರಣದೀಪ್ ಸಿಂಗ್ ಸುಮನ್ ಹೇಳಿದರು.
ಅನಧಿಕೃತ ವ್ಯಕ್ತಿಗಳಿಗೆ ಅನುಕೂಲ ಮಾಡಲು ಸಿಸಿಟೀವಿ ಕ್ಯಾಮರಾಗಳನ್ನು ಬೇರೆ ಕಡೆ ತಿರುಗಿಸಲಾಗಿದೆ ಹಾಗೂ ಅವರನ್ನು ದಾಖಲೆ ಬರೆಸಿಕೊಳ್ಳದೆ ಒಳಗೆ ಬಿಟ್ಟಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ತನಿಖೆಗೆ ಆದೇಶಿಸುವಂತೆ ಅವರು ಕೋರ್ಟಿಗೆ ಮನವಿ ಸಲ್ಲಿಸಿದರು. ಕೋರ್ಟು ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿತು. ಅನ್ಸಾರಿಯವರನ್ನು ಏಪ್ರಿಲಿನಲ್ಲಿ ಬಂಡಾ ಜೈಲಿಗೆ ತಂದು ವಿಚಾರಣಾಧೀನ ಕೈದಿಯಾಗಿ ಇಡಲಾಗಿದೆ.