ರೈತರದ್ದು ಹೋರಾಟವಲ್ಲ, ಅದು ದಲ್ಲಾಳಿಗಳ ಹೋರಾಟ: ಶೋಭಾ ಕರಂದ್ಲಾಜೆ

Prasthutha|

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದು ಕೇಂದ್ರ ಕೃಷಿ ರಾಜ್ಯಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

- Advertisement -

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಹಲವಾರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತಾಪಿ ವರ್ಗದ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಬಗೆಹರಿಸದಿರುವ ಕುರಿತು ಪತ್ರಕರ್ತರು ಇಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದಾಗ, ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಎ.ಪಿ.ಎಮ್.ಸಿ ದಲ್ಲಾಳಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಲು ಸಿದ್ದವಿದೆ, ಆದರೆ ಮಧ್ಯವರ್ತಿಗಳು ಸಮಸ್ಯೆಯನ್ನು ಜಟಿಲಗೊಳಿಸುತ್ತಿದ್ದಾರೆಂದು ಅವರು ತಿಳಿಸಿದರು.

ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶೋಭಾ ಕರಂದ್ಲಾಜೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

- Advertisement -

ಶೋಭಾ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಮಾಜಿ ಶಾಸಕ ಕೋನರೆಡ್ಡಿ “ ಕೇಂದ್ರದ ರೈತ ವಿರೋಧಿ ಕಾನೂನಿನ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ರೈತರ ಬಗ್ಗೆ ಕೃಷಿ ಸಚಿವರಿಗೆ ಉತ್ತಮ ಅಭಿಪ್ರಾಯವಿತ್ತು ಎಂದು ಅಂದುಕೊಂಡಿದ್ದೆ. ಆದರೆ ಕೇಂದ್ರ ಕೃಷಿ ಖಾತೆ ಸಚಿವರು ರೈತರನ್ನು ದಲ್ಲಾಳಿಗಳೆಂದು ಕರೆದಿರುವುದು ಸರಿಯಲ್ಲ” ಎಂದು ತಿಳಿಸಿದರು.
ರೈತರನ್ನು ವಿರುದ್ಧ ಅವಹೇಳನಕಾರಿಯಾಗಿ ಮಾತುಗಳನ್ನಾಡಿದ ಶೋಭಾ ಕರಂದ್ಲಾಜೆಯವರು ತಮ್ಮ ಹೇಳಿಕೆಯನ್ನು ಹಿಂಪಡೆದು ರೈತರ ಕ್ಷಮೆಯನ್ನು ಕೋರಬೇಕೆಂದು ಒತ್ತಾಯಿಸಿದರು.

ಶೋಭಾ ಕರಂದ್ಲಾಜೆ ರೈತರ ವಿರುದ್ಧ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್ “ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಯನ್ನು ಕೇಂದ್ರ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಮುಂದಾಗಲಿ. ಮಾತ್ರವಲ್ಲದೆ ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಕುಮಾರಸ್ವಾಮಿ ಕೇಂದ್ರಕ್ಕೆ ಸೂಚಿಸಿದ್ದಾರೆ. ಈ ಕ್ರಮಕ್ಕೆ ಮುಂದಾಗುವ ಬದಲು ರೈತರನ್ನು ಅವಮಾನಿಸುವುದು ಖಂಡನಾರ್ಹ” ಎಂದು ತಿಳಿಸಿದ್ದಾರೆ.
ರೈತರ ಶ್ರಮದಿಂದ ಜೀವನ ನಡೆಸುವ ನಾವು ಒರ್ವ ಹೆಣ್ಣುಮಗಳಾಗಿ ರೈತರ ವಿರುದ್ಧ ಇಂತಹ ಹೇಳಿಕೆ ಶೋಭಾರಿಗೆ ಭೂಷಣವಲ್ಲವೆಂದು ಸಾ.ರಾ ಮಹೇಶ್ ಅವರು ಖಾರವಾಗಿ ಪ್ರತಿಕ್ರಿಯಿಸಿದರು.



Join Whatsapp