ಹೈದರಾಬಾದ್: ಭಾರತವು ತಾಲಿಬಾನ್ ಜೊತೆ ಸಕಾರಾತ್ಮಕವಾದ ಮಾತುಕತೆಗೆ ಮುಂದಾಗಬೇಕಾಗಿತ್ತು ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಉವೈಸಿ ಸೋಮವಾರ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರ ಅಫ್ಘಾನಿಸ್ತಾನ ಬೆಳವಣಿಗೆಯ ಕುರಿತು ಮಾಹಿತಿ ಪಡೆಯಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಏಳು ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದಿರುವ ತಾಲಿಬಾನ್ ನೊಂದಿಗೆ ಭಾರತ ಯಾವುದೇ ಸಂವಹನ ಅಥವಾ ಮಾತುಕತೆಯನ್ನು ನಡೆಸಿಲ್ಲ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಭದ್ರತಾ ತಜ್ಞರು ಭಾರತ – ತಾಲಿಬಾನ್ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆ ನಡೆಸಲು ಸೂಚಿಸಿದೆಯೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಪುನರ್ ನಿರ್ಮಾಣಕ್ಕಾಗಿ ಭಾರತ 3 ಬಿಲಿಯನ್ ಡಾಲರ್ ವ್ಯಯಿಸಿದೆ. ಮಾತ್ರವಲ್ಲದೆ ಅಫ್ಘಾನ್ ಪಾರ್ಲಿಮೆಂಟ್ ಕಟ್ಟಡವನ್ನು ಭಾರತ ನಿರ್ಮಿಸಿದೆ. ಇದರ ಉದ್ಘಾಟನೆಯನ್ನು ಪ್ರಧಾನಿ ಮೋದಿ ಮತ್ತು ನಿರ್ಗಮಿತ ಅಫ್ಘಾನಿ ಅಧ್ಯಕ್ಷ ಅಶ್ರಫ್ ಘನಿ ಜಂಟಿಯಾಗಿ ನೆರವೇರಿಸಿದ್ದರೆಂದು ಉವೈಸಿ ತಿಳಿಸಿದರು. ಮಾತ್ರವಲ್ಲ ಸಲಾಮ ಅಣೆಕಟ್ಟನ್ನು ಭಾರತದ ಹಣದಿಂದ ನಿರ್ಮಿಸಲಾಗಿದ್ದು, ಭಾರತದಲ್ಲಿ ಕಲಿಯುವ ಅಫ್ಘಾನ್ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ವತಿಯಿಂದ ವಿದ್ಯಾರ್ಥಿವೇತನವನ್ನು ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಿ ತಾಲಿಬಾನ್ ಜೊತೆ ಮಾತುಕತೆ ನಡೆಸುವಂತೆ ಒತ್ತಾಯಿಸಿದಾಗ ನಮ್ಮನ್ನು ಗೇಲಿ ಮಾಡಲಾಗುತ್ತಿದೆ. ವಾಸ್ತವದಲ್ಲಿ ತಾಲಿಬಾನ್ ಗಳ ಕುರಿತು ಮಾಹಿತಿಯನ್ನು ಕಲೆಹಾಕಿ ಅವರೊಂದಿಗೆ ವ್ಯವಹರಿಸಬೇಕಾಗಿದೆ ಎಂದು ಉವೈಸಿ ತಿಳಿಸಿದರು.