ಮೂಡಬಿದ್ರಿ: ಭಾರೀ ಪ್ರಮಾಣದ ಮಾರಕಾಸ್ತ್ರಗಳು ಪೊಲೀಸ್ ವಶ | 12 ಮಂದಿ ಅರೆಸ್ಟ್

Prasthutha|

ಮಂಗಳೂರು: ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ 12 ಮಂದಿ ವೃತ್ತಿಪರ ಬೇಟೆಗಾರರನ್ನು ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಎಂಬಲ್ಲಿ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

- Advertisement -

ಬಂಧಿತರಿಂದ ಎರಡು ಓಮ್ನಿ ಕಾರುಗಳು, ಬೇಟೆಯಾಡಿದ ಎರಡು ಕಾಡು ಹಂದಿಗಳು ಹಾಗೂ ಸಾಕಷ್ಟು ಮಾರಕಾಸ್ತ್ರಗಳು ಮತ್ತು ಬಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಡುಬಿದಿರೆ ಆಸುಪಾಸಿನ ನಿವಾಸಿಗಳಾದ ಜಾನ್ ಸಿ. ಮಿನೆಜಸ್, ಶ್ರೀನಿವಾಸ, ಗುರುಪ್ರಸಾದ್, ಜೋಯಲ್ ಅನಿಲ್ ಡಿಸೋಜಾ, ಅಜಯ್, ಸನತ್, ಹರೀಶ್ ಪೂಜಾರಿ, ಮೋಹನ್ ಗೌಡ, ನೋಣಯ್ಯ, ವಿನಯ್ ಪೂಜಾರಿ, ರಮೇಶ್, ಗಣೇಶ್ ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಮೂಡಬಿದ್ರಿ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ. ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ನೀಡಲಾಗಿರುವ ಬಂದೂಕು ಸೇರಿದಂತೆ ಈಟಿ, ಭರ್ಜಿ, ಬಲೆ, ಕತ್ತಿ ಮುಂತಾದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ‌‌ ಸಂದರ್ಭ ಬೇಟೆಗಾರರು ಕೊಂದಿರುವ ಎರಡು ಹಂದಿಗಳೂ ದೊರೆತಿದ್ದು, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾರುಗಳು ಸೇರಿದಂತೆ ಎಲ್ಲ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 12 ಮಂದಿಯನ್ನು ಬಂಧಿಸಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ‌.ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಈ ತಂಡ ಕೃಷಿ ರಕ್ಷಣೆಗಾಗಿ ನೀಡಿರುವ ನಾಲ್ಕು ಎಸ್ಪಿಎಲ್ ಬಂದೂಕುಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೇ ಈ ಹಿಂದೆಯೂ ಅವರು ಸಾಕಷ್ಟು ಕಾಡುಪ್ರಾಣಿಗಳನ್ನು ಕೊಂದಿರುವುದಾಗಿಯೂ ತಿಳಿದು ಬಂದಿದೆ. ಆದ್ದರಿಂದ 12 ಮಂದಿಯನ್ನು ಬಂಧಿಸಿದ್ದು, ಇನ್ನೂ ಇದರಲ್ಲಿ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



Join Whatsapp