► 75 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಕಿನ್ನಿಗೋಳಿ ವತಿಯಿಂದ ರಕ್ತದಾನ ಶಿಬಿರ
ಕಿನ್ನಿಗೋಳಿ: 75 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಕಿನ್ನಿಗೋಳಿ ಹಾಗೂ ಯೇನಪೋಯಾ ಆಸ್ಪತ್ರೆ ದೇರಳಕಟ್ಟೆ ಸಹಯೋಗದಲ್ಲಿ ಮರ್ಹೂಮ್ ಮೊಹಮ್ಮದ್ ಅನೀಸ್ ಗೋಳಿಜೋರ ಸ್ಮರಣಾರ್ಥ ಶಾಂತಿನಗರ ಗುತ್ತಕಾಡು ಕೆಜೆಎಂ ಸಮುದಾಯ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಿತು.
ಕಾರ್ಯಕ್ರಮವನ್ನ ಐಕಳ ಪೊಂಪೈ ಪದವಿ ಕಾಲೇಜು ಪ್ರಾಂಶುಪಾಲ ಡಾ.ಪುರುಷೋತ್ತಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ರಕ್ತ ಹಾಗೂ ದೇಶವನ್ನ ಒಂದೇ ದೃಷ್ಟಿಕೋನದಲ್ಲಿ ನೋಡಬಹುದಾಗಿದೆ. ರಕ್ತ ಹೇಗೆ ಭಿನ್ನ ಭಿನ್ನ ಗುಂಪುಗಳನ್ನು ಹೊಂದಿದ್ದರೂ ಬಣ್ಣ ಒಂದೇ ಆಗಿರುತ್ತದೆಯೋ, ಹಾಗೆಯೇ ಭಾರತವೂ ವೈವಿಧ್ಯಮಯ ಸಂಸ್ಕೃತಿಯನ್ನ ಅಳವಡಿಸಿಕೊಂಡರೂ ರಾಷ್ಟ್ರ ಧ್ವಜದಡಿ ಒಂದೇ ಅನ್ನೋ ಭಾವನೆಯನ್ನು ಮೂಡಿಸುತ್ತದೆ ಎಂದರು.
ಖಿಲ್ರಿಯಾ ಜುಮ್ಮಾ ಮಸೀದಿ ಶಾಂತಿನಗರ ಖತೀಬರು ಉಮರುಲ್ ಫಾರೂಕ್ ಸಖಾಫಿ ಮಾತನಾಡಿ, ಒಂದು ಹನಿ ರಕ್ತಕ್ಕಾಗಿ ಇಂದು ಜಗತ್ತಿನಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗುತ್ತಿರುವುದು ಪ್ರಶಂಸನೀಯ. ಪ್ರವಾದಿ ಮುಹಮ್ಮದ್ (ಸ.ಅ.) ಅವರು ಅನುಯಾಯಿಗಳಿಗೆ ಬೋಧಿಸಿದಂತೆ ಒಳ್ಳೆಯ ಕಾರ್ಯಗಳು ವ್ಯಕ್ತಿಯೋರ್ವನ ಯಶಸ್ಸಿನ ಹಾದಿಯಾಗಿರುತ್ತದೆ. ಆದ್ದರಿಂದ ಯುವಕರು ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಬದಲಾವಣೆಗೆ ಕಾರಣವಾಗಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಇದರ ಧರ್ಮ ಗುರು ರೆವರೆಂಡ್ ಫಾದರ್ ಮ್ಯಾಥ್ಯೂ ವಾಸ್, ಲಯನ್ಸ್ ಕ್ಲಬ್ ಕಿನ್ನಿಗೋಳಿ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೆ. ಸಾಯೀಶ್ ಚೌಟ ಹಾಗೂ ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರ ಇದರ ಧರ್ಮದರ್ಶಿ ವಿವೇಕಾನಂದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬ್ಲಡ್ ಡೋನರ್ಸ್ ಫೋರಂ ಅಧ್ಯಕ್ಷ ಟಿಕೆ ಖಾದರ್ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಪಿಎಫ್ಐ ಮೆಡಿಕಲ್ ಇನ್ ಚಾರ್ಜ್ ಇಲ್ಯಾಸ್ ಬಜ್ಪೆ, ಬೆಂಗಳೂರು ಇಂದಿರಾ ಗಾಂಧಿ ಆಸ್ಪತ್ರೆ ಕೌನ್ಸಿಲ್ ಸದಸ್ಯೆ ಶೈಲಾ ಸಿಕ್ವೇರಾ, ಬ್ಲಡ್ ಡೋನರ್ಸ್ ಫೋರಂ ಗೌರವಾಧ್ಯಕ್ಷ ಇಬ್ರಾಹಿಂ ಗುತ್ತಕಾಡು, ಸದಸ್ಯರಾದ ರಫೀಕ್ ಕಿನ್ನಿಗೋಳಿ, ರಹೀಂ ಕಿನ್ನಿಗೋಳಿ, ಶಫಿಕ್ ಗುತ್ತಕಾಡು, ನವಾಝ್ ಕಲ್ಕರೆ, ಪಿಎಫ್ಐ ಕಿನ್ನಿಗೋಳಿ ವಲಯಾಧ್ಯಕ್ಷ ಇಕ್ಬಾಲ್, ಎಂಜೆಎಂ ಪುನರೂರು ಮಾಜಿ ಅಧ್ಯಕ್ಷ ಹಸನಬ್ಬ ಇಡ್ಯಾ ಸುರತ್ಕಲ್, ಯೇನೆಪೋಯಾ ಆಸ್ಪತ್ರೆಯ ನವಾಝ್, ಸುಹೈಲ್ ಸಖಾಫಿ ಮತ್ತಿತ್ತರರು ಉಪಸ್ಥಿತರಿದ್ದರು. ಟಿಕೆ ಖಾದರ್ ಸ್ವಾಗತಿಸಿ, ಇಬ್ರಾಹಿಂ ವಂದಿಸಿದರು. ಜಲೀಲ್ ಜೆಹೆಚ್ ಕಾರ್ಯಕ್ರಮ ನಿರೂಪಿಸಿದರು.