ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಪೂರ್ವಸಿದ್ಧತೆ ಕುರಿತು ನಗರದ ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಈ ಬಾರಿ ವಿಶೇಷವಾಗಿ ವೈದ್ಯರು, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕರ್ತರು, ‘ವಿವಿಧ ಇಲಾಖೆಯ ಕೋವಿಡ್ ವಾರಿಯರ್ಗಳು ಸೇರಿ ಒಟ್ಟು 100 ಸಿಬ್ಬಂದಿ ಹಾಗೂ ಕೋವಿಡ್-19 ಸೊಂಕಿನಿಂದ ಗುಣಮುಖರಾಗಿರುವ ಎಲ್ಲಾ ವಯೋಮಾನದವರನ್ನು ಒಳಗೊಂಡಂತೆ 25 ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇತರ ಗಣ್ಯರೂ ಸೇರಿ ಒಟ್ಟು 1000 ಜನರನ್ನು ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ದೂರದರ್ಶನ ಹಾಗೂ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆಗೆ ಅವಕಾಶವಿದೆ ಎಂದು ಗೌರವ ಗುಪ್ತ ತಿಳಿಸಿದರು.
ಆಹ್ವಾನಿತರು ಎಂಟು ಗಂಟೆಯ ಒಳಗಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಾಜರಿರಬೇಕು.
ಧ್ವಜಾರೋಹಣ ಮಾಡಲು ಧ್ವಜ ಸ್ತಂಭ ನಿರ್ಮಾಣವಾಗಿದ್ದು, ಬೆಳಿಗ್ಗೆ 8-55ಕ್ಕೆ ಮುಖ್ಯಮಂತ್ರಿ ಮೈದಾನಕ್ಕೆ ಆಗಮಿಸಲಿದ್ದಾರೆ. ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳು ಪರಿಚಯ ಮಾಡಿದ ಬಳಿಕ ಮುಖ್ಯಮಂತ್ರಿಗಳಿಂದ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಧ್ವಜಾರೋಹಣದ ನಂತರ ತೆರೆದ ಜೀಪಿನಲ್ಲಿ ಸಿಎಂ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕಾರ ಮಾಡಲಿದ್ದು, ನಂತರ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ನೀಡಲಿದ್ದಾರೆ ಎಂದರು.
ಗೌರವ ರಕ್ಷೆ ಸ್ವೀಕರಿಸುವ ತಾಲೀಮನ್ನು ಒಟ್ಟು 3 ದಿನಗಳ ಕಾಲ ಸತತವಾಗಿ ನಡೆಸಲಾಗುತ್ತಿದೆ. ಈ ತಾಲೀಮಿನಲ್ಲಿ ಕೆಎಸ್ಆರ್ಪಿ/ಸಿಆರ್ಪಿಎಫ್, ಬಿಎಸ್ಎಫ್, ಸಿಎಆರ್/ಕೆಎಸ್ ಐಎಸ್ ಎಫ್ ಟ್ರಾಫಿಕ್, ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್/ಟ್ರಾಫಿಕ್ ವಾರ್ಡನ್ ಅಗ್ನಿಶಾಮಕ ಸಿಬ್ಬಂದಿ/ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್ನ ಒಟ್ಟು 20 ತುಕಡಿಗಳಲ್ಲಿ ಸುಮಾರು 470 ಮಂದಿ ಭಾಗಿಯಾಗಲಿದ್ದಾರೆ ಎಂದು ಮಾಹಿತು ನೀಡಿದರು.
ಮೈದಾನದಲ್ಲಿ ಸುರಕ್ಷತೆಗಾಗಿ 60 ಸಿಸಿ ಕ್ಯಾಮೆರಾ ವ್ಯವಸ್ಥೆ, 2 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಆಂಬ್ಯುಲೆನ್ಸ್ಗಳಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಜೊತೆಗೆ ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿಶಾಮಕ ವಾಹನಗಳೊಂದಿಗೆ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.