ಬೆಂಗಳೂರು: ಬ್ಯಾಂಕ್‌ಗಳು ದಿವಾಳಿಯಾದಾಗ ಗ್ರಾಹಕರಿಗೆ 5 ಲಕ್ಷ ರೂ. ಪರಿಹಾರ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಇದಕ್ಕೆ ಜನರ ತೆರಿಗೆ ಹಣದ ಬದಲು, ಅಕ್ರಮವಾಗಿ ಸಾಲ ಪಡೆದು ದಿವಾಳಿಗೆ ಕಾರಣರಾದ ಪ್ರಭಾವಿಗಳಿಂದ ಹಣ ವಸೂಲಿ ಮಾಡಿ ಗ್ರಾಹಕರಿಗೆ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರಿನ ಮುಖ್ಯ ವಕ್ತಾರರಾದ ಶರತ್ ಖಾದ್ರಿ, “ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರೆಂಟಿ ಕಾರ್ಪೊರೇಷನ್ ಕಾಯಿದೆ (ಡಿಐಸಿಜಿಸಿ) – 1961ಕ್ಕೆ ತಿದ್ದುಪಡಿ ತಂದಿರುವುದರಿಂದ ದೇಶಾದ್ಯಂತ ಪ್ರತಿವರ್ಷ ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಹಣ ಕಳೆದುಕೊಂಡು ಆತಂಕದಲ್ಲಿರುವ ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪ್‌ರೇಟಿವ್ ಸೊಸೈಟಿಯ ಸುಮಾರು 40 ಸಾವಿರ ಗ್ರಾಹಕರಿಗೂ ಇದು ಅನುಕೂಲವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆಯಾಗಲಿದ್ದು, ವಂಚಕರು ಮಾಡಿದ ತಪ್ಪಿಗೆ ಲಕ್ಷಕೋಟಿ ಮೊತ್ತದ ಜನರ ತೆರಿಗೆ ಹಣವನ್ನು ವಿನಿಯೋಗಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.
ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಬ್ಯಾಂಕ್‌ಗಳಿಂದ ಭಾರೀ ಮೊತ್ತದ ಸಾಲದ ಪಡೆದು ಪಂಗನಾಮ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದರಿಂದ ಹಲವು ಸಣ್ಣಪುಟ್ಟ ಬ್ಯಾಂಕ್‌ಗಳು ಹಾಗೂ ಸಹಕಾರಿ ಸಂಸ್ಥೆಗಳು ಮುಳುಗಡೆಯಾಗುತ್ತಿವೆ. ಇಂತಹ ಪ್ರತಿಯೊಂದು ಪ್ರಕರಣವನ್ನು ಕೆದಕಿದಾಗಲೂ ಪ್ರಭಾವಿ ರಾಜಕಾರಣಿಗಳು, ದೊಡ್ಡ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಅಕ್ರಮದ ಹಿಂದಿರುವುದು ಬೆಳಕಿಗೆ ಬರುತ್ತದೆ. ಸೂಕ್ತ ತನಿಖೆ ನಡೆಸಿ ಅವರಿಂದ ಹಣ ವಸೂಲಿ ಮಾಡಬೇಕು. ಅಕ್ರಮ ಎಸಗಿ ಬ್ಯಾಂಕ್ ದಿವಾಳಿಗೆ ಕಾರಣರಾದವರ ಆಸ್ತಿಯನ್ನು ವಶಪಡಿಸಿಕೊಂಡು ಹರಾಜು ಹಾಕಬೇಕು ಎಂದು ಶರತ್ ಖಾದ್ರಿ ಆಗ್ರಹಿಸಿದವರು.
ಬ್ಯಾಂಕ್‌ಗಳಿಗೆ ವಂಚಿಸುವ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಧೈರ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾಯಿದೆಯನ್ನು ಸರ್ಕಾರ ಜಾರಿಗೆ ತಂದಿಲ್ಲ. ಅಕ್ರಮ ಎಸಗಿದವರನ್ನು ಆರಾಮಾಗಿ ತಿರುಗಾಡಲು ಬಿಟ್ಟು ಜನರ ತೆರಿಗೆ ದುಡ್ಡಿನಿಂದ ಭಾರೀ ಮೊತ್ತದ ಪರಿಹಾರ ಕೊಡಲು ಮುಂದಾಗಿದೆ. ಒಂದುಕಡೆ ವಂಚಕರಿಗೆ ಮುಕ್ತ ಅವಕಾಶ ನೀಡಿ, ಮತ್ತೊಂದು ಕಡೆ ವಂಚನೆಗೊಳಗಾದವರಿಗೆ ಪರಿಹಾರ ನೀಡುತ್ತಿರುವುದು ಮಗುವನ್ನು ಚಿವುಟಿ ತೊಟ್ಟಿಲು ತೂಗಿದಂತಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಾಕತ್ತಿದ್ದರೆ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೂರಕವಾಗುವಂತೆ ಕಾಯಿದೆಗೆ ತಿದ್ದುಪಡಿ ತರಲಿ ಎಂದು ಶರತ್ ಖಾದ್ರಿ ಸವಾಲು ಹಾಕಿದ್ದಾರೆ.