ಬ್ರಹ್ಮಾವರ : ಉಡುಪಿ ಜಿಲ್ಲೆಯ ನಿವಾಸಿಯಾಗಿರುವ ಮುಮ್ತಾಝ್ ಈ ವರ್ಷದ ಫೆಬ್ರವರಿ – ಮಾರ್ಚ್ನಲ್ಲಿ ನಡೆದ ನ್ಯಾಯಾಂಗ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಜಿಲ್ಲಾ ನ್ಯಾಯಾಧೀಶರಾದ ರಾಜ್ಯದ ಮೊದಲ ಮುಸ್ಲಿಮ್ ಮಹಿಳೆ ಎಂಬ ಸಾಧನೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಮುಲ್ಕಿ ಮೂಲದವರಾಗಿರುವ ಮುಮ್ತಾಝ್ ಈ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ನ್ಯಾಯಾಂಗ ಪರೀಕ್ಷೆಗೆ ಹಾಜರಾಗಿದ್ದರು. ಅವರು 12 ಅಭ್ಯರ್ಥಿಗಳ ಪೈಕಿ ಅಗ್ರ ಶ್ರೇಣಿಯನ್ನು ಪಡೆದು ತೇರ್ಗಡೆಯಾಗುವ ಮೂಲಕ ಜಿಲ್ಲಾ ನ್ಯಾಯಾಧೀಶೆಯಾಗಿ ಆಯ್ಕೆಯಾದರು. ಮುಲ್ಕಿಯ ಅಬ್ದುಲ್ ರಹಿಮಾನ್ ಮತ್ತು ಅತಿಜಮ್ಮ ದಂಪತಿಯ ಪುತ್ರಿಯಾದ ಮುಮ್ತಾಝ್ ಅವರು ಮಂಗಳೂರಿನ ಭರತ ಮಠ ಪ್ರೌಢ ಶಾಲೆಯಲ್ಲಿ ಶಿಕ್ಷಣ ಮುಗಿಸಿದರು. ಮಾತ್ರವಲ್ಲದೆ ಐಕಳ ಪೊಂಪೈ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದರು. ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿಯನ್ನು ಪೂರ್ಣಗೊಳಿಸಿ, ಮೈಸೂರಿನಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪಡೆದರು.
ಶಿಕ್ಷಣ ಪೂರೈಸಿದ ನಂತರ ಅವರು ಮಾಜಿ ಎಂಎಲ್ಸಿ ಹಾಗೂ ವಕೀಲರಾಗಿರುವ ಐವನ್ ಡಿಸೋಜಾ ಅವರ ಸಹಾಯಕಿಯಾಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 2010 ರಲ್ಲಿ ಭಟ್ಕಳ JMFC ನ್ಯಾಯಾಲಯದಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. ನಂತರ ಅವರನ್ನು ಉಡುಪಿ JMFC ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ಪ್ರಸ್ತುತ ಮುಮ್ತಾಝ್ ಅವರು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ (ಎಡಿಪಿ) ಸೇವೆ ಸಲ್ಲಿಸುತ್ತಿದ್ದಾರೆ.