ಅಹ್ಮದಾಬಾದ್ : ಸೂರತ್ ನ ಚೌಕ್ ಬಝಾರ್ ಪೊಲೀಸ್ ಠಾಣೆಯ ವಶದಲ್ಲಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸೂರತ್ ಜಿಲ್ಲೆಯಿಂದ ವರದಿಯಾಗಿದೆ. ಸೂರತ್ ನಿವಾಸಿ ಇರ್ಷಾದ್ ಶೇಖ್ ಎಂಬ ವ್ಯಕ್ತಿಯನ್ನು ಪೊಲೀಸರು ಹೊಡೆದು ಕೊಲ್ಲಲಾಗಿದೆಯೆಂದು ಕುಟುಂಬದ ಮೂಲಗಳು ಆರೋಪಿಸಿದೆ.
ಚೌಕ್ ಬಝಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ನನ್ನ ಪತಿಗೆ ಕರೆ ಮಾಡಿದ್ದಾರೆ. ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬಂದು ವರದಿ ಮಾಡುವಂತೆ ಹೇಳಿದ್ದಾರೆ. ಆದರೆ ಬುಧವಾರ ನನ್ನ ಪತಿಯ ಮೃತ ದೇಹವನ್ನು ಪೊಲೀಸರು ನಮಗೆ ಹಸ್ತಾಂತರಿಸಲಾಗಿದೆಯೆಂದು ಮೃತರ ಪತ್ನಿ ಶಬಾ ಖಾತೂನ್ ಹೇಳಿದರು.
ಪೊಲೀಸರು ನನ್ನ ಪತಿಗೆ ಮೂರನೇ ದರ್ಜೆಯ ಚಿತ್ರಹಿಂಸೆಗೆ ಒಳಪಡಿಸಿರುವುದು ಅವರ ಸಾವಿಗೆ ಪ್ರಮುಖ ಕಾರಣವೆಂದು ಶಬಾ ಆರೋಪಿಸಿದ್ದಾರೆ. ಮಾತ್ರವಲ್ಲದೆ ಪೊಲೀಸರು ನನ್ನ ಪತಿಯನ್ನು ಕೊಂದಿದ್ದಾರೆ ಅವರು ಹೇಳಿದ್ದಾರೆ. ಜೀವಂತವಾಗಿ ಠಾಣೆಯ ಕಡೆಗೆ ತೆರಳಿದ ಇರ್ಷಾದ್ ಶೇಖ್ ಅವರ ಮೃತ ದೇಹವನ್ನು ರಿಕ್ಷಾದಲ್ಲಿ ಹಾಕಿ ತರಲಾಗಿದೆಯೆಂದು ಆತನ ಅತ್ತೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಆರೋಪಿ ಇರ್ಷಾದ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ ನಂತರ ಪೊಲೀಸ್ ದೌರ್ಜನ್ಯ ನಡೆದಿದೆಯೆಂದು ಹೇಳಲಾಗುತ್ತಿದೆ. ಗಂಭೀರ ಹಲ್ಲೆಯಿಂದ ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿದೆ. ಇರ್ಷಾದ್ ಶೇಖ್ ಅವರ ಕಸ್ಟಡಿ ಮರಣದ ಕುರಿತು ಕುಟುಂಬದವರು ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ.