ಟೋಕಿಯೋ ಒಲಿಂಪಿಕ್ಸ್ | ಕುಸ್ತಿ: ಸೆಮಿಫೈನಲ್‌ನಲ್ಲಿ ಪೂನಿಯಾಗೆ ಸೋಲು – ಕಂಚಿನ ಪದಕದ ಆಸೆ ಜೀವಂತ

Prasthutha|

ಟೋಕಿಯೋ, ಆ.6: ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ, ಟೋಕಿಯೋ ಒಲಿಂಪಿಕ್ಸ್‌ನ ಪುರುಷರ 65 ಕೆ. ಜಿ. ಫ್ರೀಸ್ಟೈಲ್ ವಿಭಾಗದ ಸೆಮಿ ಫೈನಲ್​ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಫೈನಲ್ ಫೈಟ್ ನಿಂದ ಹೊರನಡೆದಿದ್ದಾರೆ.

- Advertisement -

ಸೆಮಿ ಫೈನಲ್‌ನಲ್ಲಿ ಬಜರಂಗ್, ಮೂರು ಬಾರಿಯ ವಿಶ್ವ ಚಾಂಪಿಯನ್ ಅಜರ್‌ ಬೈಜಾನ್‌ನ ರೆಸ್ಲರ್ ಹಾಜಿ ಅಲಿಯೇವ್ ವಿರುದ್ಧ 5-12 ಅಂತರದಿಂದ ಸೋಲು ಕಂಡಿದ್ದಾರೆ. ಆದರೂ ಭಾರತದ ಪದಕದ ಆಸೆ ಇನ್ನೂ ಜೀವಂತವಾಗಿದ್ದು, ಕಂಚಿನ ಪದಕಕ್ಕಾಗಿ ಬಜರಂಗ್ ಶನಿವಾರ ನಡೆಯುವ ಪಂದ್ಯದಲ್ಲಿ ರಷ್ಯಾದ ಗಾಡ್ಜಿಮುರಾದ್ ರಶಿದೋವ್ ಸವಾಲನ್ನು ಎದುರಿಸಲಿದ್ದಾರೆ.

ಹಾಜಿ ಅಲಿಯೇವ್ ಆಕ್ರಮಣಕಾರಿ ಆಟದ ಎದುರು ಬಜರಂಗ್​ಗೆ ಕೇವಲ 5 ಅಂಕ ಸಂಪಾದಿಸಲಷ್ಟೇ ಶಕ್ತವಾಯಿತು.

- Advertisement -

ಈ ಮೊದಲು ಬಜರಂಗ್ ಪೂನಿಯಾ, ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಇರಾನ್‌ನ ಮೊರ್ತೆಜಾ ಗಿಯಾಸಿ ವಿರುದ್ದ ಗೆಲುವು ದಾಖಲಿಸಿದರು. ಆದರೆ ಸೆಮಿಫೈನಲ್‌ನಲ್ಲಿ ಮಿಂಚುವಲ್ಲಿ ಭಾರತದ ಪೈಲ್ವಾನ ವಿಫಲರಾದರು.

ಪುರುಷರ 57 ಕೆ.ಜಿ ವಿಭಾಗದಲ್ಲಿ 23 ವರ್ಷದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಎರಡನೇ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾದರು. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್‌ ಕುಮಾರ್ 66 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಇದುವರೆಗೆ 2 ಬೆಳ್ಳಿ, 3 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 65 ಸ್ಥಾನದಲ್ಲಿದೆ.
34 ಚಿನ್ನದ ಪದಕಳೊಂದಿಗೆ ಚೀನಾ ಮೊದಲ ಸ್ಥಾನ, 30 ಚಿನ್ನದ ಪದಕಗಳನ್ನು ಗೆದ್ದಿರುವ ಅಮೆರಿಕ ದ್ವಿತೀಯ ಹಾಗೂ 22 ಚಿನ್ನದ ಪದಕಗಳನ್ನು ಗೆದ್ದಿರುವ ಅತಿಥೇಯ ಜಪಾನ್ ಮೂರನೇ ಸ್ಥಾನದಲ್ಲಿದೆ.



Join Whatsapp