ಪೆಗಾಸಸ್ ಆಗಸ ಕಳ್ಳಕಿಂಡಿ, ಭಾರತ ಸರಕಾರ ಪ್ರಜಾಪ್ರಭುತ್ವಕ್ಕೆ ತೋಡಿದ ಗುಂಡಿ

Prasthutha|

ಮೋದಿ ಮುಂದಾಳತ್ವದ ಒಕ್ಕೂಟ ಸರಕಾರ ಬಂದಾಗಿನಿಂದ ಅದು ಕೆಲವು ಭಾರತೀಯ ನೀತಿಗಳ ಜೊತೆ ಹೊಂದಾಣಿಕೆ ಆಗದ ಸಂಗತಿಗಳ ಸಂಗವನ್ನು ಅಧಿಕರಿಸಿದ್ದು ಕಣ್ಣಿಗೆ ಕಟ್ಟುವಂತೆ ಇದೆ. ಅವುಗಳಲ್ಲಿ ಇಸ್ರೇಲ್ ಜೊತೆಗಿನ ಗಾಢ ಸಂಬಂಧ ಸಹ ಒಂದು. ಅದು ಪೆಗಾಸಸ್ ಗಗನ ಕಳ್ಳಕಿಂಡಿ ಸಂಬಂಧ ಎಂಬುದು ಈಗ ಬಟಾಬಯಲಾಗಿದೆ.

- Advertisement -

ಬೇರೆಯವರ ಫೋನ್ ಕದಿಯುವುದರಿಂದ ಹಿಡಿದು ಬೇರೆಯವರ ಸ್ನಾನದ ಮನೆ ಇಣುಕುವವರವರೆಗೆ ಮನೋವ್ಯಾಧಿಗ್ರಸ್ತರು ಎಲ್ಲೆಡೆ ಇದ್ದಾರೆ. ಮನೋ ವಿಜ್ಞಾನದ ಪ್ರಕಾರ ಜಗತ್ತಿನ 20 ಜನರಲ್ಲಿ ಒಬ್ಬರು ಸಯ್ಕೋಪಾತ್‌ ಗಳು. ಅದರ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ ಆದರೆ ಅದರ ಕಳ್ಳಾಸಕ್ತಿ ಇದ್ದೇ ಇರುತ್ತದೆ.

ಇಸ್ರೇಲ್ ಯಾವುದೋ ಕಾಲದ ಇತಿಹಾಸದ ಮೇಲೆ ಹುಟ್ಟಿದ ದೇಶ. ಅಮೆರಿಕ ಆಳುವುದು ಯೂರೋಪಿಯನ್ನರು. ಇಂಗ್ಲೆಂಡ್ ರಾಜ ಮನೆತನ ನಾರ್ವೆ ವಯ್ಕುಂಗ್ ಮೂಲದ್ದು. ಭಾರತದ ಅಧಿಕಾರದ ಕೀಲಿಕೈ ಬಹುತೇಕ ಭಾರತಕ್ಕೆ ನುಗ್ಗಿ ಬಂದ ಆರ್ಯ ಜನವರ್ಗದವರ ಹಿಡಿತದಲ್ಲಿ ಇದೆ.

- Advertisement -

ಕಂಪ್ಯೂಟರಿಗೆ ಕನ್ನ, ಫೋನ್ ಟ್ಯಾಪಿಂಗ್ ಇವೆಲ್ಲ ಟಾಡ್ಡಿ ಟ್ಯಾಪಿಂಗ್‌ ಗಿಂತ ನೀಚ ಕೆಲಸಗಳು. ಆದರೆ ಇವೆಲ್ಲ ವೈಟ್ ಕಾಲರ್‌ ಗಳ ಅಪರಾಧ ಆಗಿರುವುದರಿಂದ ಇಸ್ರೇಲ್ ಮೂಲದ ಸ್ಕೈವೇರ್ ದಾಳಿ ಬಗೆಗೆ ಯಾವ ಬಗೆಯ ಕಳ್ಳ ಎಂಬ ಭಾವನೆ ಬಲಿಯುವುದಿಲ್ಲ. ಇನ್ನು ಜನಸಾಮಾನ್ಯರಿಗಂತೂ ಇದು ಯಾವ ಬಗೆಯ ಕಳ್ಳತನ, ಮೋಸ, ವಂಚನೆ ಎನ್ನುವುದು ಗೊತ್ತಾಗುವುದಿಲ್ಲ.

ಜಗತ್ತಿನಾದ್ಯಂತ 50,000 ಜನರ ಫೋನ್ ಮಾಹಿತಿಯನ್ನು ಪೆಗಾಸಸ್ ಸೋರಿಸಿಕೊಂಡಿದೆ ಎಂಬುದು ಸಣ್ಣ ಲೆಕ್ಕಾಚಾರ. ಇದರಿಂದ ಲಾಭ ಪಡೆದವರು ಯಾರು? ಅಮೆರಿಕದಂಥ ದೇಶಗಳು ಇಸ್ರೇಲ್‌ ನಂಥ ದೇಶಗಳನ್ನು ಹಿಡಿದುಕೊಂಡು ಇಡೀ ಜಗತ್ತಿನ ಮಾಹಿತಿ ಕದಿಯಬಲ್ಲವು. ಹಿಂದೆ ರಶಿಯಾ ಅದಕ್ಕೆ ಸವಾಲು ಹಾಕಿದ್ದರೆ, ಇಂದು ಚೀನಾ ಹಾಗೆ ಬೆಳೆದಿದೆ. ದೊಡ್ಡ ಬೆಳವಣಿಗೆಯ ಒಂದು ಭಾಗ ಎಂದರೆ ತನ್ನ ಪರ ಗೂಢಚಾರಿಕೆ ಬಲಪಡಿಸಿಕೊಳ್ಳುವುದಾಗಿದೆ.

ಇದರಲ್ಲಿ ಹೆಚ್ಚು ಸಫಲತೆ ಬಡ ದೇಶಗಳಿಗೆ ಕಷ್ಟ. ಆದರೆ ಭಾರತ ಒಂದು ವಿಚಿತ್ರ ದೇಶ. ಇಲ್ಲಿ ಬಡವರನ್ನು ಇನ್ನಷ್ಟು ಬಡವರಾಗಿಸುತ್ತ, ಕೆಲವೇ ಕೆಲವರ ಬಂಡವಾಳ ಬೆಳೆಸುತ್ತ ಅವರ ಪರ ಗೂಢಚಾರಿಕೆ ಬಲ ವರ್ಧಿಸುವುದು ನಡೆಯುತ್ತದೆ. ಅದು ಭಾರತದ ಇಂದಿನ ಪೆಗಾಸಸ್ ಸ್ಕೈವೇರ್ ದಾಳಿಯಲ್ಲಿ ಸ್ಪಷ್ಟವಿದೆ.

ಭಾರತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದ್ರಾವಿಡ ಪಕ್ಷದ ನಾಯಕ ಸ್ಟಾಲಿನ್ ಸಹಿತ 300ಕ್ಕೂ ಹೆಚ್ಚು ಜನರ ಫೋನ್‌ ಗಳನ್ನು ಪೆಗಾಸಸ್ ಮೂಲಕ ಗಮನಿಸಿ ಮಾಹಿತಿ ಕದಿಯಲಾಗಿದೆ. ನಿಜ ಪ್ರತಿ ಪಕ್ಷದವರ ಮೇಲೆ, ಉದ್ಯಮಿ ಸ್ಪರ್ಧಿಗಳಲ್ಲಿ ಪರಸ್ಪರ, ಕಳ್ಳ ಸಾಗಾಣಿಕೆ ಲೋಕ ಇಲ್ಲೆಲ್ಲ ಈ ಗೂಢಚಾರಿಕೆ ಇರುತ್ತದೆ. ಅದರಲ್ಲಿ ಗೊತ್ತಾಗದಂತೆ ನಿಮ್ಮ ಫೋನಿಗೆ ಬರುವ ಪೆಗಾಸಸ್ ಅತ್ಯಾಧುನಿಕವಾದುದು.

ಹಿಂದೆ ಭಾರತವು ಇಸ್ರೇಲ್‌ ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿತ್ತು. ಮೋದಿ ಸರಕಾರವು ಅತಿ ಶಸ್ತ್ರಾಸ್ತ್ರ ಖರೀದಿಯವರೆಗೆ ಆಳ ಗೆಳೆತನ ಬೆಳೆಸಿತು. ಯಾಕೆಂದರೆ ಪೆಗಾಸಸ್ ಎಂಬುದು ಈಗ ಸ್ಪಷ್ಟವಾಗಿದೆ. ಪೆಗಾಸಸ್ ಕಂಪೆನಿಯು ಇಸ್ರೇಲ್‌ನದು. ಅದು ಪೆಗಾಸಸ್ ಫೋನ್ ಕಳ್ಳಗಿವಿ ಕೂಡ ತಯಾರಿಸುತ್ತದೆ. ಅದು ಸರಕಾರಗಳ ಹೊರತು ಬೇರೆಯವರಿಗೆ ಮಾರಾಟಕ್ಕಿಲ್ಲ ಎಂದ ಮೇಲೆ ಸಂಘ ಪರಿವಾರದ ಕಪಾಪೋಷಿತ ಭಾರತ ಸರಕಾರ ಅತ್ತ ಆಸಕ್ತಿ ವಹಿಸಿಯೇ ವಹಿಸುತ್ತದೆ.

ಚಾಣಕ್ಯನೆಂಬವನು ಅಮಾತ್ಯ ರಾಕ್ಷಸನ ಮೇಲೆ ವಿಷ ಕನ್ಯೆ ಬಿಟ್ಟಿದ್ದು, ಅಭಿಮನ್ಯುವಿಗೆ ಪೂರ್ಣ ಚಕ್ರವ್ಯೂಹದ ರಹಸ್ಯ ತಿಳಿಯದಂತೆ ಮಾಡಿದ ಕೃಷ್ಣ, ಅಮೃತ ಪಡೆಯಲು ದುಡಿದವರಲ್ಲಿ ಕರಿಯರಿಗೆ ಅಮೃತ ಸಿಗದಂತೆ ಮಾಡಿದ ವಿಷ್ಣುವಿನ ಸ್ತ್ರೀವೇಷ ಇಂಥವೆಲ್ಲವೂ ಅಂಥ ಗೂಢಚಾರಿಕೆಯೇ, ಲಾಭಕ್ಕಾಗಿ ವಿರೋಧಿಗಳ ಹಣಿಯುವ ಪೂರ್ವಸೂರಿ ಪೆಗಾಸಸ್ ತಂತ್ರಗಳೇ ಆಗಿವೆ.

ಏನಪ್ಪ ಇದು, ಹೇಗಪ್ಪ ಇದು?

ಎಲ್ಲೋ ಇರುವ ಪೆಗಾಸಸ್‌ ಗೆ ನಿಮ್ಮ ಫೋನನ್ನು ನೋಡಿಕೊಳ್ಳುವ ಗುರಿ ಇದ್ದರೆ. ಏನೋ ಲಿಂಕ್ ಕಳುಹಿಸುತ್ತಾರೆ. ಕ್ಲಿಕ್ಕಿದರೆ ಒಳಹೊಕ್ಕು ತನ್ನ ಜಾಗ ಹಿಡಿದು ನಿಮಗೆ ಗೊತ್ತಾಗದಂತೆ ಕುಳಿತುಕೊಳ್ಳುತ್ತದೆ. ಅನಂತರ ನಿಮ್ಮ ಫೋನಿನಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರವೂ ಪೆಗಾಸಸ್ ಸ್ಕಯ್ ವೇರ್ ಮೂಲಕ ಕದಿಯಲಾಗುತ್ತದೆ ಕೆಲವೊಮ್ಮೆ ಮಿಸ್ ಕಾಲ್ ಮೂಲಕ ನಿಮ್ಮ ಫೋನಲ್ಲಿ ಆ ಕಂತ್ರಿ ತಂತ್ರಾಂಶ ಬಂದು ಸೇರಬಹುದು. ಯಾವುದೋ ಮೆಸೇಜ್ ಮೂಲಕ, ಇನ್ಯಾವುದೋ ವಾಯ್ಸ್ ಕಾಲ್ ಮೂಲಕ ಸಹ ಈ ಕಳ್ಳಕಿಂಡಿ ನಮ್ಮ ಫೋನಲ್ಲಿ ಜಾಗ ಹಿಡಿಯಬಹುದು. ಕದಿಯಲೆಂದು ಬಂದ ಕಳ್ಳ ಸಿಕ್ಕಿಬೀಳುವವರೆಗೆ ಕದಿಯುತ್ತಲೇ ಇರುತ್ತಾನೆ. ತಿಂಗಳುಗಟ್ಟಲೆ ಸೋಸಿಕೊಂಡ ಮೇಲೆ ಎಲ್ಲೋ ಮೋಸದ ಲವಲೇಶ ದೊರೆತರೆ ಅದೇ ಕಳ್ಳರ ಆಸ್ತಿ. ಅಪರಾಧ ಲೋಕ ವಿಸ್ತರಿಸುತ್ತಿರುವುದಕ್ಕೆ ಇದೊಂದು ಉದಾಹರಣೆ ಅಷ್ಟೆ.

ಪೆಗಾಸಸ್ಸಾಯುಧ

 2010ರಲ್ಲಿ ಎನ್‌ ಎಸ್‌ ಓ ಪೆಗಾಸಸ್ ಎಂಬ ಕಳ್ಳಕಿಂಡಿಯನ್ನು ತಯಾರಿಸಿತು. ಸರಕಾರಗಳಿಗೆ ಉಗ್ರವಾದ ಮಟ್ಟ ಹಾಕಲು ಇದು ಸಹಾಯಕ ಎನ್ನಲಾಯಿತು. ಆದ್ದರಿಂದ ಆಯುಧ ಎಂದು ಕರೆದು, ಸರಕಾರಗಳಿಗೆ ಮಾತ್ರ ಮಾರಾಟ ಎಂದಿತು. ನಿವ್, ಶಾಲೆನ್, ಓಮ್ರಿ – ಎನ್‌ ಎಸ್‌ ಓ ತಯಾರಿಸಿದ ಇದು ಇಸ್ರೇಲ್ ಸರಕಾರದ ಮೂಲಕವೇ ಮಾರಾಟವಾಗುತ್ತದೆ. ನೇತಾನ್ಯೇಹು ಗುಜರಾತಿಗೆ ಬಂದು, ಉಪ್ಪುನೀರು ಕುಡಿಸಲು ಯಂತ್ರ ದಾನ ಮಾಡಿದಾಗಲೇ ಈ ವ್ಯವಹಾರ ಕುದುರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. 2014ರಲ್ಲಿ 1,400 ಮೊಬೈಲ್‌ ಗಳಿಂದ ಪೆಗಾಸಸ್ ಮಾಹಿತಿ ಕದ್ದಿದೆ. ಆದ್ದರಿಂದ ಇದನ್ನು ಕಳ್ಳಾಯುಧ ಎನ್ನಬಹುದು. ಸೌದಿ ಅರೇಬಿಯಾದ ಅರಸೊತ್ತಿಗೆಯ ಅವ್ಯವಹಾರದ ಟೀಕಾಕಾರ ಜಮಾಲ್ ಕಶೋಗಿ ಮೊದಲಾದವರ ಕೊಲೆಯಲ್ಲಿ ಪೆಗಾಸಸ್ ಪಾತ್ರ ಇದೆ. ಪೆಗಾಸಸ್ ಎಂದರೆ ಗ್ರೀಕ್ ಪುರಾಣದ ಹಾರುವ ಕುದುರೆ. ಮೊಬೈಲ್ ಮಾಹಿತಿ ಹಾರಿಸುವ ತೋರದೆ ಹಾರಿ ಹೋಗುವ ಕುದುರೆ ಇದು.

ಭಾರತ, ಯುಎಇ, ಸೌದಿ ಅರೇಬಿಯಾ, ಮೆಕ್ಸಿಕೋ ಸಹಿತ 7 ದೇಶಗಳ ಸರಕಾರಗಳಿಗಾಗಿ 17 ಮಾಧ್ಯಮ ಸಂಸ್ಥೆಗಳು ಈ ಕಳ್ಳಗಿವಿ ಬಳಸಿವೆ ಎಂಬುದು ಒಂದು ಪತ್ತೆ. ಭಾರತದಲ್ಲಿ 49 ಪತ್ರಕರ್ತರು, 3 ಮಂದಿ ವಿರೋಧ ಪಕ್ಷದ ನಾಯಕರು, ಇಬ್ಬರು ಮಂತ್ರಿಗಳು, ಒಬ್ಬರು ಎಸ್‌ ಸಿ ಜಡ್ಜ್‌ ರ ಫೋನ್‌ ಗಳನ್ನು ಕಳ್ಳಗಿವಿ ಸಂಪರ್ಕಕ್ಕೆ ತರಲಾಗಿದೆ. ಅಮ್ನೆಸ್ಟಿ ಭದ್ರತಾ ವಿಭಾಗ ಮತ್ತು ಕೆನಡಾದ ತತ್ಸಂಬಂಧಿತ ತಾಂತ್ರಿಕ ಸಂಸ್ಥೆ ಇದನ್ನು ಪತ್ತೆ ಮಾಡಿದೆ. ಅಲ್ಲದೆ ಮೇಲಿನ 6 ದೇಶಗಳಲ್ಲಿ 80 ಪತ್ರಕರ್ತ ಮತ್ತಿತರರ ಫೋನ್ ಕಳ್ಳಗಿವಿ ಆಗಿ ಸೋರಿ ಹೋಗಿದೆ. ಲೋಕದಲ್ಲಿ ಇದೊಂದು ದೊಡ್ಡ ಜಾಲ, ಪತ್ತೆಯಾದುದು ಸಣ್ಣ ಬಿಲ. ದೊಡ್ಡ ಗಣಿಗಾರಿಕೆಯೇ ಇಲ್ಲಿ ಇದೆ.

ವಿಶಿಷ್ಟವೆನ್ನುವುದಕ್ಕಿಂತ ವಿಚಿತ್ರವೆಂದರೆ ಭಾರತದ ಐಟಿ ಮಂತ್ರಿ ಅಶ್ವಿನಿ ವೈಷ್ಣವ್‌ ರ ಸಹಿತ ಮೋದಿ ಸರಕಾರದ ಇಬ್ಬರು ಸಚಿವರ ಫೋನ್‌ ಗಳನ್ನು ಸಹ ಪೆಗಾಸಸ್ ದಾರಿಯಲ್ಲಿ ಹ್ಯಾಕಿದ್ದಾಗಿ ‘ದ ವೈರ್’ ಹೇಳಿದೆ. ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಜಗಳ ಇರುವಂತೆ ಕೇಂದ್ರದಲ್ಲೂ ಒಳಗಿಂದೊಳಗೆ ಕುರ್ಚಿ ಜಗಳ ಇದೆ. ಅದರ ಒಂದು ತುಣುಕು ಇದು ಅಷ್ಟೆ.

ಮನೆಯೊಳಗೆಯೇ ಗೂಢಚಾರಿಕೆ ಮಾಡುವವರು ಇರುತ್ತಾರೆಂದ ಮೇಲೆ ಸರಕಾರಗಳಲ್ಲಿ ಅದು ಅನಿವಾರ್ಯ ಎನ್ನುವುದು ಪರಿಸ್ಥಿತಿಯ ವ್ಯಂಗ್ಯ. ಯಥಾಪ್ರಕಾರ ಬಿಜೆಪಿ ಒಕ್ಕೂಟ ಸರಕಾರವು ನಾನು ಅಂತಹದ್ದೇನೂ ಮಾಡಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದಿದ್ದಾರೆ. ಬಿಜೆಪಿ ಸರಕಾರವೇ ಪ್ರಜಾಪ್ರಭುತ್ವಕ್ಕೆ ದೊಡ್ಡ ಕಳಂಕ ಎನ್ನುವುದು ಸರಿಯಾದ ವಿಮರ್ಶೆಯಾಗುತ್ತದೆ. ಮೆಕ್ಸಿಕೋ ದೇಶದಲ್ಲಿ 15,000ದಷ್ಟು ಜಂಗಮವಾಣಿಗಳಿಗೆ ಪೆಗಾಸಸ್ ಸ್ಕೈವೇರ್ ಹೊಕ್ಕು ಬಳಕೆ ಆಗಿದೆ ಎಂದು ವಾಶಿಂಗ್ಟನ್ ಪೋಸ್ಟ್, ದ ಗಾರ್ಡಿಯನ್ ಸಹಿತ ಪಾಶ್ಚಾತ್ಯ ಪತ್ರಿಕೆಗಳು ವರದಿ ಮಾಡಿವೆ. ಆದರೆ ಅವರ ದೇಶಗಳಲ್ಲಿ ಹ್ಯಾಕರ್ ಹಾವಳಿಯ ಬಗೆಗೆ ಹೆಚ್ಚು ಹೇಳಿಲ್ಲ. ಏಕೆಂದರೆ ಸಾಮಾನ್ಯವಾಗಿ ಚೀನಾ ಹ್ಯಾಕಿಂಗ್, ಪಾಕಿಸ್ತಾನ ಹ್ಯಾಕಿಂಗ್, ರಶಿಯಾ ಕಂಪ್ಯೂಟರ್ ಕನ್ನ, ಇರಾನ್ ಫೋನ್ ಟ್ಯಾಪಿಂಗ್ ಇಂಥ ಸಿದ್ಧ ಸುದ್ದಿಗಳು ಸದಾ ಇರುತ್ತವೆ.

ಕ್ಯೂ ಸ್ಯೂಟ್ ಹಾಗೂ ಟ್ರೈಡೆಂಟ್

ಪೆಗಾಸಸ್‌ ಗೆ ಕ್ಯೂ ಸ್ಯೂಟ್ ಹಾಗೂ ಟ್ರೈಡೆಂಟ್ ಎಂಬ ಬದಲಿ ಹೆಸರುಗಳೂ ಇವೆ. ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಐಫೋನ್ ವ್ಯವಸ್ಥೆಯಲ್ಲಿ ಇದು ಬೇರೆಲ್ಲವುಗಳಿಗಿಂತ ಚೆನ್ನಾಗಿ ಕಳ್ಳತನ ಮಾಡುತ್ತದಂತೆ. ಇಸ್ರೇಲ್‌ನ ಗೂಢಚಾರ ಸಂಸ್ಥೆಯು ಇದನ್ನು ಯಾವುದೇ ಸರಕಾರದ ಗೂಢಚಾರ ಇಲಾಖೆಗೆ ಮಾತ್ರ ಮಾರಲಾಗುತ್ತದೆ.

ಉದಾಹರಣೆಗೆ ಭಾರತದಲ್ಲಿ ತಾನು ಹಾಕಿದ ಫೋನ್ ಕಳ್ಳಗಿವಿ ಮುಚ್ಚಲು ಪಾಕಿಸ್ತಾನ ಕಳ್ಳಗಿವಿ ಬಗೆಗೆ ಜೋರಾಗಿ ಕೂಗಿದರೆ ಆಯಿತು. ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ. ಜನಸಾಮಾನ್ಯರ ಸ್ಥಿತಿ ಬಿಜೆಪಿ ಒಕ್ಕೂಟ ಸರಕಾರದಡಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ. ಟೀಕಾಕಾರರು ಯಾರು? ಪ್ರತಿ ಪಕ್ಷಗಳವರು, ಪತ್ರಕರ್ತರು, ಕಾರ್ಮಿಕ ನಾಯಕರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಇಂಥವರು. ಆದ್ದರಿಂದ ಪೆಗಾಸಿಸ್ ದಾಳಿಗೆ ಇಂಥವರನ್ನೇ ಒಳಪಡಿಸಲಾಗಿದೆ. ಇದರ ಅರ್ಥ ಇಷ್ಟೇ. ಟೀಕಾಕಾರರ ಬಾಯಿ ಮುಚ್ಚಿಸುವುದು ಅಥವಾ ಅವರ ಯಾವುದಾದರೂ ಹುಳುಕನ್ನು ಹಿಡಿದು ಪ್ರತಿದಾಳಿ ಮಾಡುವುದಾಗಿದೆ. ಉದಾಹರಣೆಗೆ ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟವರಲ್ಲಿ ಚಡ್ಡಿ ಮತ್ತು ತೆರಿಗೆಗಳ್ಳ ತಮ್ಮ ಕುಳಗಳೇ ಇರುವುದರಿಂದ ಮೋದಿ ಸರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದು. ಆದರೆ ಜ್ಯೋತಿರಾದಿತ್ಯ ಸಿಂಧ್ಯಾರಂಥವರನ್ನು ಬಾಗಿಸಿ ತನ್ನ ಪಕ್ಷಕ್ಕೆ ಕರೆದುಕೊಳ್ಳಬಹುದು. ಪೆಗಾಸಸ್ ಒಂದೇ ಅಲ್ಲ. ಸಾವಿರಾರು ಹ್ಯಾಕ್ ಟೂಲ್‌ ಗಳು ಜಗತ್ತಿನಲ್ಲಿ ಇವೆ. ಪ್ರತಿ ನಿತ್ಯ ಬೇರೆಯವರ ಫೋನ್ ಕದಿಯುವುದು, ಕಂಪ್ಯೂಟರ್‌ ಗೆ ಹೋಗುವುದು ಕೆಲವರ ಚಟ. ಇದೊಂದು ಮಾನಸಿಕ ರೋಗ. ಕಾನೂನಿನ ರೀತ್ಯಾ ಇವೆಲ್ಲ ಅಪರಾಧ. ಆದರೂ ಈ ಜನರಿಗೆ ಆ ಬಗೆಗೆ ಭಯವಿಲ್ಲ. ಭಾರತದ ಕಾನೂನು ದುರ್ಬಲವಲ್ಲ. ಕಾನೂನು ಪಾಲಕರು ದುರ್ಬಲರು. ಅಲ್ಲದೆ ಕಾನೂನಿನ ಅರ್ಥವನ್ನು ವಿಷಯಾಂತರ ಮಾಡುವ ಚಾತುರ್ಯವೂ ಇಲ್ಲಿನವರಲ್ಲಿ ಇದೆ. ಹಾಗಾಗಿ ಫೋನ್‌ ಕಳ್ಳರು, ಕಂಪ್ಯೂಟರ್ ಕಳ್ಳರು ನುಸುಳುಕೋರರಾಗಿಯೇ ಉಳಿದಿದ್ದಾರೆ. ಸಾಕಷ್ಟು ಕಡೆ ಮಾಧ್ಯಮ ಸಂಸ್ಥೆಗಳೇ ಇಂಥ ಕಳ್ಳಗಿವಿ, ಕಳ್ಳಕಿಂಡಿ ಏಜೆಂಟರಾಗಿ ಕೆಲಸ ಮಾಡುತ್ತಾರೆ. ಕರ್ನಾಟಕದಲ್ಲಿ ಹಿಂದೆ ರಾಮಕಷ್ಣ ಹೆಗಡೆ ಸರಕಾರ ಬಹುತೇಕ ಮಾಧ್ಯಮವನ್ನು ಈ ರೀತಿ ದುರುಪಯೋಗ ಮಾಡಿಕೊಂಡಿತ್ತು. ಈಗಿನ ನರೇಂದ್ರ ಮೋದಿ ಸರಕಾರವಂತೂ ಮಾಧ್ಯಮವನ್ನು ಅಡವು ಪಡೆದಿದ್ದು ಪೆಗಾಸಸ್ ದಾಳಿಯಲ್ಲಿ ಅವರ ಪಾತ್ರವೂ ಇದೆ. ಪ್ರಶಾಂತ್ ಕಿಶೋರ್‌ ರಂಥ ರಾಜಕೀಯ ಪಂಡಿತರು, ಸಾಮಾಜಿಕ ನ್ಯಾಯದ ಎಚ್ಚರದರಿವಿನವರು ಮೊದಲಾದವರ ಫೋನ್ ಮೇಲೆ ಭಾರತ ಒಕ್ಕೂಟ ಸರಕಾರವು ಪೆಗಾಸಸ್ ಆಗಸ ಕೊಕ್ಕೆ ಹಾಕಿದ್ದಾಗಿ ವರದಿಯಿದೆ. ಕಳ್ಳರದೇ ಆಡಳಿತವಾದರೆ, ಅವರ ಕೈಗೇ ಅಧಿಕಾರ ಕೊಟ್ಟು ಕದ್ದದ್ದೇಕೆ ಎಂದು ಕೇಳಲಾಗದ ಸ್ಥಿತಿ ಭಾರತದ್ದು. ಪೆಗಾಸಸ್ ಪೆಗ್ಗು ಈಗ ಅಮಲು ತಂದಿದೆ, ಮುಂದೆ ಮಗ್ಗುಲು ಮುರಿದು ಮಲಗಿಸಲಿದೆ.

ರೂಪೇಶ್ ಕುಮಾರ್ ಅವರು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವವರು. ಅವರ ವಿರುದ್ಧ ಆಗಿದೆ ಪೆಗಾಸಸ್ ಬಳಕೆ. ಇತ್ತೀಚೆಗೆ ಜೈಲಿನಲ್ಲಿದ್ದಾಗಲೇ ಸಾವನ್ನಪ್ಪಿದ ಫಾದರ್‌ ಸ್ಟ್ಯಾನ್ ಸ್ವಾಮಿಯವರ ವಿಷಯದಲ್ಲೂ ಪೆಗಾಸಸ್ ಹಗೆ ಸಾಧಿಸಿದೆ. ಬಿಜೆಪಿ ಪರ ನಿಂತ ಹಿಂದಿನ ನ್ಯಾಯಮೂರ್ತಿ ರಂಜನ್ ಗೋಗೋಯಿ ಮೇಲೆ ರತಿ ಹಿಂಸೆಯ ದೂರು ನೀಡಿದ್ದ ಇಡೀ ಕುಟುಂಬದ ಮೇಲೆ ಪೆಗಾಸಸ್ ದಾಳಿಯಂತೆ. ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿ ಕಾಂಗ್ರೆಸ್- ಜೆಡಿಎಸ್ ಸರಕಾರ ಬೀಳಿಸಿ ಬಿಜೆಪಿಯ ಹಿಂದಿನ ಬಾಗಿಲ ಸರಕಾರ ತರುವಲ್ಲಿ ಪೆಗಾಸಸ್ ಪಾತ್ರ ಬಹಳ ಹಿರಿದಂತೆ. ಕೇರಳ, ತಮಿಳುನಾಡು, ಪಡುವಣ ಬಂಗಾಳ ಚುನಾವಣೆಗಳಲ್ಲಿ ಪೆಗಾಸಸ್ ಬೋಗಸ್ ಬಹಳ ಮಾಡಿತಂತೆ. ಆದರೆ ಬಿಜೆಪಿಯ ಆಸೆಯ ಬಲೂನಿಗೆ ಅಲ್ಲಿನ ಜನ ಸೂಜಿ ಚುಚ್ಚಿದರಂತೆ. ಹಾಗಾಗಿ ಅದರ ಬಗೆಗೆ ಕೆಲವರಿಗೆ ನಂಬಿಕೆ ಹೋಗಿದೆಯಂತೆ.ಇನ್ಯಾವುದೋ ಹೊಸ ಬೋಗಸ್ ಬಂದೇ ಬರುತ್ತದೆ. ಕಳ್ಳತನ ಮಾನವನ ವಿಕಾಸದೊಂದಿಗೇ ಬಂದಿದೆ. ವಿಧಾನ ಬದಲಾವಣೆ, ಬೆಳವಣಿಗೆ ಆಗುತ್ತಿದೆ ಅಷ್ಟೆ.



Join Whatsapp