ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಚುನಾವಣಾ ರಾಜಕಾರಣಕ್ಕೆ ಆತ್ಮತೃಪ್ತಿಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಚಾಮರಾಜನಗರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಈ ಹಿಂದೆ ಸುದೀರ್ಘ ಕಾಲ ಕಾಂಗ್ರೆಸ್ ನಲ್ಲಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ತಮ್ಮ ಜನ್ಮದಿನವಾದ ಆಗಸ್ಟ್ 6ರಂದೇ ಪ್ರಸಾದ್ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದು ವಿಶೇಷ.
ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆಗಳು ಬೇರೆ ತಿರುವು ಪಡೆದ ಕಾರಣ ಸ್ಪರ್ಧೆ ಮಾಡಬೇಕಾಯಿತು. ಈಗ ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ. ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ ಮಾತಿನಿಂದ ಹಿಂದೆ ಸರಿಯುವುದೂ ಇಲ್ಲ ಎಂದು ಹೇಳಿದ್ದಾರೆ. ನಾನು ಆತ್ಮತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ. 50 ವರ್ಷದ ನನ್ನ ರಾಜಕೀಯ ಜೀವನದ ಪುಸ್ತಕ ಬಿಡುಗಡೆಯಾಗಲಿದ್ದು, ಅದರಲ್ಲಿ ನನ್ನ ರಾಜಕೀಯ ಜೀವನದ ಎಲ್ಲಾ ಏಳು ಬೀಳು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಬಿಎಸ್ಪಿ ತೊರೆದು ನಿನ್ನೆಯಷ್ಟೇ ಬಿಜೆಪಿ ಸೇರಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ಭೇಟಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಹುಟ್ಟುಹಬ್ಬದ ಶುಭಕೋರಿದರು.