ಬೆಂಗಳೂರು, ಆ. 5 : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ. ಬೆಳ್ಳಂ ಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ಶಿವಾಜಿನಗರದ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ವಿದೇಶಿ ವ್ಯವಹಾರಗಳು ಕಂಡು ಬಂದ ಹಿನ್ನೆಲೆ, ರೋಷನ್ ಬೇಗ್ ಗೆ ಸಂಬಂಧಿಸಿದ 6 ಕಡೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಸಿ ಆರ್ ಪಿ ಎಫ್ ಭದ್ರತೆ ನೇತೃತ್ವದಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದಾರೆ. ಇತ್ತೀಚೆಗೆ ಐಎಎಂ ಕೇಸ್ ನಲ್ಲಿ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶಿಸಿತ್ತು.
ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್.ರೋಷನ್ ಬೇಗ್ ಆಸ್ತಿ ಜಪ್ತಿಗೆ ಹೈಕೊರ್ಟ್ ಆದೇಶ ನೀಡಿತ್ತು. ಅದರಂತೆ ಇಂದು ಸರ್ಕಾರ ರೋಷನ್ ಬೇಗ್ ಆಸ್ತಿಯನ್ನು ಜಪ್ತಿಮಾಡಿದೆ. ರೋಷನ್ ಬೇಗ್ ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್ ನ ಜಪ್ತಿ ಮಾಡಲಾಗಿದೆ.
ಐಎಂಎಯಿಂದ ಸರ್ಕಾರಿ ಶಾಲೆಗೆ 10 ಕೋಟಿ ದೇಣಿಗೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ದೇಣಿಗೆ ನೀಡಿರುವುದರಿಂದ ಹಿಂದಿರುಗಿಸಲು ಸಾಧ್ಯವಿಲ್ಲ ಅಂತ ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ವಾದ ಮಂಡಿಸಿದ್ದಾರೆ. ಸಿಬಿಐ ಆರೋಪ ಪಟ್ಟಿ ದಾಖಲಿಸಿದ್ದರಿಂದ ಇಡಿ ತನಿಖೆ ನಡೆಸುತ್ತಿದೆ. ಅಕ್ರಮ ಹಣ ಪ್ರಸರಣದ ಬಗ್ಗೆ ಇಡಿ ತಂಡ ತನಿಖೆ ನಡೆಸುತ್ತಿದೆ.