29 ಮಂದಿ ಸಚಿವರಿಂದ ಪ್ರಮಾಣವಚನ ಸ್ವೀಕಾರ; ಸಂಭ್ರಮ-ಆಕ್ರೋಶಕ್ಕೆ ಸಾಕ್ಷಿಯಾದ ರಾಜಭವನ

Prasthutha|

ಬೆಂಗಳೂರು, ಆ.4: ರಾಜಭವನದಲ್ಲಿ ಬುಧವಾರ ಮಧ್ಯಾಹ್ನ ನಡೆದ ಪ್ರಮಾಣವಚನ ಸಮಾರಂಭದಲ್ಲಿ 29 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

- Advertisement -


ಮೊದಲಿಗನಾಗಿ ಗೋವಿಂದ ಕಾರಜೋಳ ಪ್ರತಿಜ್ಞೆ ಸ್ವೀಕರಿಸಿದರು. ನಂತರ ಕ್ರಮವಾಗಿ ಕೆ.ಎಸ್. ಈಶ್ವರಪ್ಪ, ಆರ್.ಅಶೋಕ, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್. ಅಂಗಾರ, ಜೆ.ಸಿ.ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಡಾ.ಸಿ.ಎಸ್. ಅಶ್ವತ್ಥನಾರಾಯಣ, ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್, ಮುರುಗೇಶ್ ನಿರಾಣಿ, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜ, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ಡಾ.ಕೆ.ಸಿ.ನಾರಾಯಣ ಗೌಡ, ಬಿ.ಸಿ.ನಾಗೇಶ್, ವಿ.ಸುನೀಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ಮುನಿರತ್ನ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕೆ.ಎಸ್. ಈಶ್ವರಪ್ಪ ಅವರು 5ನೇ ಬಾರಿ ಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುರುಗೇಶ್ ನಿರಾಣಿ ರೈತರ ಹೆಸರಿನಲ್ಲಿ, ಶಿವರಾಮ್ ಹೆಬ್ಬಾರ್ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

- Advertisement -

ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಪ್ರಭು ಚೌಹಾಣ್ ಗೋಮಾತೆ ಮತ್ತು ಸಂತ ಸೇವಾಲಾಲ್ ಹೆಸರಿನಲ್ಲಿ, ಬಿ.ಸಿ.ಪಾಟೀಲ್ ರೈತರು ಮತ್ತು ಜಗಜ್ಯೋತಿ ಬಸವೇಶ್ವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.
ಶಶಿಕಲಾ ಜೊಲ್ಲೆ ಅವರ ಹೆಸರು ನೂತನ ಸಚಿವರ ಪಟ್ಟಿಯಲ್ಲಿ ಇರಲಿಲ್ಲ. ಕೊನೆ ಗಳಿಗೆಯಲ್ಲಿ ಹೆಸರು ಸೇರಿಸಲಾಗಿತ್ತು. ಹಾಗಾಗಿ ಅವರಿಗೆ ಕೊನೆ ಗಳಿಗೆಯಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕ್ಕೆ ವಿಳಂಬವಾಗಿ ಅವರು ಆಗಮಿಸಿದರು. ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಬರಲು ಜೊಲ್ಲೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಯಿತು.

ರಾಜಭವನದಲ್ಲಿ ಸಂಭ್ರಮ-ಆಕ್ರೋಶ
ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಚಿವರ ಬೆಂಬಲಿಗರು ಒಂದು ಕಡೆ ಸಂಭ್ರಮದಿಂದ ಘೋಷಣೆ ಕೂಗಿದರೆ, ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗುತ್ತಿದ್ದ ದೃಶ್ಯ ರಾಜಭವನದಲ್ಲಿ ಕಂಡುಬಂತು. ಸಂಪುಟಕ್ಕೆ ಸೇರುವ ಶಾಸಕರ ಬೆಂಬಲಿಗರು ಬೆಳಗ್ಗಿಯಿಂದಲೇ ರಾಜಭವನದತ್ತ ಹೆಜ್ಜೆ ಹಾಕಿದ್ದರು. ಇದರಿಂದ ರಾಜಭವನ ರಸ್ತೆಯಲ್ಲಿ ಜನಸ್ತೋಮ ಕಂಡುಬಂತು.

ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದವರ ಕುಟುಂಬದ ಸದಸ್ಯರು, ಕ್ಷೇತ್ರದ ಮತದಾರರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಕೂಡ ರಾಜಭವನಕ್ಕೆ ಆಗಮಿಸಿದ್ದರು. ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿದ್ದುದರಿಂದ ಎಲ್ಲರಿಗೂ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗಲಿಲ್ಲ.



Join Whatsapp