ವೈಯಕ್ತಿಕ ವಿಚಾರಕ್ಕೆ ಕೋಮು ಬಣ್ಣ ನೀಡಿರುವುದು ಖಂಡನೀಯ : SKSSF ಕೊಡಗು

Prasthutha|

ಸೈನಿಕರು ನಮ್ಮ ಕಾವಲುಗಾರರು, ದೇಶ ಕಾಯುವ ಯೋಧರನ್ನು ಪ್ರತಿಯೊಬ್ಬ ಪ್ರಜೆಯು ಗೌರವಿಸಬೇಕಾಗಿದೆ. ವಿಶಿಷ್ಟವಾಗಿ ಕೊಡಗಿನ ಎಲ್ಲಾ ಜನಾಂಗದಿಂದಲೂ ಯೋಧರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೋಯಿಕೇರಿಯಲ್ಲಿ ಆಕಸ್ಮಿಕವಾಗಿ ನಡೆದ ಅಪಘಾತದಿಂದಾಗಿ ನಡೆದ ಅಹಿತಕರ ಘಟನೆ ಸೈನಿಕನೆಂದು ಅರಿತುಕೊಂಡಾಗಿರಲಿಲ್ಲ ಎಂಬುದು ಘಟನೆಯ ವರದಿಗಳಿಂದ ಸ್ಪಷ್ಟವಾಗುತ್ತದೆ. ಮಡಿಕೇರಿ – ಸುಂಟಿಕೊಪ್ಪ ಹೆದ್ದಾರಿಯಲ್ಲಿ ವಾಹನ ಡಿಕ್ಕಿ, ಅಪಘಾತಗಳು ಆಗಾಗ್ಗೆ ನಡೆಯುತ್ತಲೇ ಇರುವುದು ಸಾಮಾನ್ಯವಾಗಿದೆ. ಅದೇ ರೀತಿಯ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು, ಒಂದು ಸಮುದಾಯವನ್ನು ಗುರಿಯಾಗಿಸಿ ಜಿಲ್ಲೆಯಲ್ಲಿನ ಶಾಂತಿ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನ ಅತ್ಯಂತ ಖಂಡನೀಯ ಎಂದು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ಮಡಿಕೇರಿ ಹೇಳಿಕೆ ನೀಡಿದ್ದಾರೆ.

- Advertisement -

ಸೈನಿಕನೆಂದು ಅರಿತುಕೊಂಡು ಉದ್ದೇಶಪೂರ್ವಕವಾಗಿ ನಡೆಸಿರುವ ಘಟನೆಯಾದಲ್ಲಿ ಅದನ್ನು ಸಹ ತೀವ್ರವಾಗಿ ಖಂಡಿಸಬೇಕಾಗಿದೆ. ಈ ವಿಚಾರದಲ್ಲಿ ಎರಡೂ ಕಡೆಯವರಿಂದ ಎಲ್ಲಾ ಅಪಘಾತಗಳ ಬಳಿಕ ನಡೆಯುತ್ತಿರುವ ಸಾಮಾನ್ಯ ತಪ್ಪುಗಳು ಸಂಭವಿಸಿರುವುದಾಗಿ ತಿಳಿದು ಬಂದಿದೆ. ಆದರೆ ನೈಜ ವಿಷಯಗಳನ್ನು ಮರೆಮಾಚಿ ಧರ್ಮದ ಲೇಪನವಿಟ್ಟು ಪರಸ್ಪರ ದ್ವೇಷ ಸೃಷ್ಟಿಸಿ ಸೌಹಾರ್ದತೆಯನ್ನು ಕೆಡಿಸಲು ಇದರ ಹಿಂದೆ ಕರಾಳ ಹಸ್ತಗಳು ವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ನಂತರದ ಬೆಳವಣಿಗೆಯಲ್ಲಿ ಕಂಡುಬರುತ್ತಿದೆ. ಇದರ ಅಂಗವಾಗಿ ಹೊರ ಜಿಲ್ಲೆಯ ಮತಾಂಧ ಶಕ್ತಿಗಳ ಬೆಂಬಲದೊಂದಿಗೆ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾದ ಕೊಡಗಿನಲ್ಲಿ ಅನಗತ್ಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಅದರಂತೆಯೇ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿರುವುದು ಹಾಸ್ಯಾಸ್ಪದ.

ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ಧರ್ಮ, ಭಾಷೆ, ಜಾತಿ ಎನ್ನದೇ ಎಲ್ಲರೂ ಒಗ್ಗಟ್ಟಾಗಿ ಕೈ ಜೋಡಿಸಿದ ಪ್ರಜ್ಞಾವಂತ ಸಮಾಜ ಈ ರೀತಿಯ ಘಟನೆಗಳು ನಡೆದಾಗ ಸೀಮಿತ ಸಮುದಾಯವನ್ನು ಗುರಿ ಮಾಡುತ್ತಿರುವುದು ಅತ್ಯಂತ ದುಃಖಕರ ಸಂಗತಿ. ಈ ರೀತಿಯ ಘಟನೆಗಳು ನಡೆದಾಗ ಮತಾಂಧ ಶಕ್ತಿಗಳಿಗೆ ಮಧ್ಯಪ್ರವೇಶ ಮಾಡಲು ಅನುಮತಿ ನೀಡದೆ ಕಾನೂನು ಪಾಲಕರು ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯ ಶಾಂತಿ, ಸೌಹಾರ್ದತೆಯನ್ನು ಉಳಿಸಬೇಕಾಗಿದೆ ಎಂದು SKSSF ಕೊಡಗು ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



Join Whatsapp