29 ಮಂದಿಗೆ ಸಚಿವ ಸ್ಥಾನ, ಡಿಸಿಎಂ ಹುದ್ದೆ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Prasthutha|

ಬೆಂಗಳೂರು, ಆ.4: ಮೊದಲ ಹಂತದಲ್ಲಿ ಇಂದು 29 ಮಂದಿ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದು, ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ರಚನೆ ವಿಷಯದಲ್ಲಿ ನಿನ್ನೆ ವರಿಷ್ಠರೊಂದಿಗೆ ಅಂತಿಮ ಸುತ್ತಿಮ ಮಾತುಕತೆ ನಡೆಸಲಾಗಿದೆ. ಪಟ್ಟಿ ಅಂತಿಮವಾಗಿದ್ದು, ರಾಜ್ಯಪಾಲರಿಗೆ ಕಳುಹಿಸಲಾಗಿದೆ. 29 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.

ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ. ಈ ಬಾರಿಯ ಮಂತ್ರಿ ಮಂಡಲ ಅನುಭವ, ಹೊಸ ಶಕ್ತಿಯ ಸಮ್ಮಿಲನವಾಗಿದೆ. 7 ಮಂದಿ ಒಬಿಸಿ, 3 ಮಂದಿ ಎಸ್ ಸಿ, 1 ಎಸ್ ಟಿ, 7 ಮಂದಿ ಒಕ್ಕಲಿಗ, 7 ಒಬಿಸಿ, 8 ಲಿಂಗಾಯತ ಸಚಿವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

- Advertisement -

ವಿಜಯೇಂದ್ರ ಅವರ ಬಗ್ಗೆ ಯಡಿಯೂರಪ್ಪ ಜೊತೆ ಹೈಕಮಾಂಡ್ ಮಾತನಾಡಿದೆ. ಅರುಣ್ ಸಿಂಗ್ ಕೂಡ ವಿಜಯೇಂದ್ರ ಜೊತೆ ಮಾತನಾಡಿದ್ದಾರೆ. ಇಂದಿನ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ ಎಂದು ಸ್ಪಷ್ಟಪಡಿಸಿದರು.

ಭ್ರಷ್ಟಾಚಾರ ಆರೋಪ ಇರುವವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಅವರು, ಪ್ರಮಾಣ ವಚನದ ಬಳಿಕ ಇದಕ್ಕೆ ಉತ್ತರ ಸಿಗಲಿದೆ ಎಂದರು.

ಕೆಲವು ಹಿರಿಯರು, ಅನುಭವಿಗಳನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಹೇಳಿದರು.



Join Whatsapp