ನವದೆಹಲಿ, ಆ. 3: ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದಾರೆ.
ಸಾಲದ ಸುಳಿಯಲ್ಲಿರುವ ವಿಐಎಲ್ ಕಂಪನಿ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಹಣವನ್ನು ಪಾವತಿಸಬೇಕಿದೆ. ಈ ನಡುವೆ ಕುಮಾರ್ ಮಂಗಲಂ ಬಿರ್ಲಾ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ನಮಗೆ ಪರಿಹಾರ ಕಲ್ಪಿಸಬೇಕು ಎಂದು ಕೇಳಿದ್ದಾರೆ.
ಅಂಕಿಅಂಶಗಳ ಪ್ರಕಾರ ವಿಐಎಲ್ ಕಂಪನಿಯು ಎಜಿಆರ್ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ 50,399 ಕೋಟಿ ರೂ. ಹಣವನ್ನು ಪಾವತಿಸಬೇಕಿದೆ. ಸರ್ಕಾರ ಹಾಕಿರುವ ಎಜಿಆರ್ ಲೆಕ್ಕ ಸರಿಯಿಲ್ಲ ಎಂದು ಎಂದು ವಿಐಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕಂಪನಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ವಿಐಎಲ್ ಕಂಪನಿಗೆ 25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ 2020ರ ಸೆಪ್ಟೆಂಬರ್ ನಲ್ಲಿ ಅನುಮತಿ ನೀಡಿತ್ತು. ಆದರೆ ಅಷ್ಟು ಮೊತ್ತವನ್ನು ಸಂಗ್ರಹಿಸಲು ಕಂಪನಿ ವಿಫಲವಾಗಿತ್ತು.
ಬಿರ್ಲಾ ಅವರು ಕಂಪನಿಯಲ್ಲಿ ಶೇ 27ರಷ್ಟು ಷೇರು ಹೊಂದಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿರ್ಲಾ ಅವರು, ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯಗಳನ್ನು ಕಲ್ಪಿಸದಿದ್ದಲ್ಲಿ ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳನ್ನು ಮುಚ್ಚುತ್ತೇವೆ ಹೇಳಿದ್ದರು.
ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದರು.