ಬೆಂಗಳೂರು, ಆಗಸ್ಟ್ 3: ಇದೇ ತಿಂಗಳ 10 ರಂದು ಇಡೀ ದೇಶ ಕಗ್ಗತ್ತಲಲ್ಲಿ ಮುಳುಗಲಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಶನ್ ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಆಗಸ್ಟ್ 10ರಂದು ದೇಶಾದ್ಯಂತ ವಿದ್ಯುತ್ ಸ್ಥಗಿತಗೊಳ್ಳಲಿದೆ.
ವಿದ್ಯುತ್ ಕಾಯಿದೆ 2003 ರ ತಿದ್ದುಪಡಿಯನ್ನು ವಿರೋಧಿಸಿ ವಿದ್ಯುತ್ ನೌಕರರ ಅಸೋಸಿಯೇಷನ್ ನ ಒಕ್ಕೂಟದ ಎಲ್ಲ ಅಧಿಕಾರಿಗಳು, ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹೋರಾಟ ಕೈಗೊಳ್ಳಲಿದ್ದಾರೆ. ಪ್ರತಿಭಟನೆಗೆ ರೈತ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು, ಜನಪರ ಸಂಘಟನೆಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳು ಸಹ ಕೈಜೋಡಿಸಲಿರುವ ಹಿನ್ನೆಲೆಯಲ್ಲಿ ಮುಷ್ಕರ ಯಶಸ್ವಿಯಾಗುವ ಸಾಧ್ಯತೆ ಇದೆ.
ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಹಾಗೂ ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ . ವಿದ್ಯುತ್ ದರ ಏರಿಕೆಯಿಂದ ಜನ ತತ್ತರಿಸಲಿದ್ದು, ಈ ಉದ್ಯಮವನ್ನೇ ನಂಬಿರುವ ವಿದ್ಯಾವಂತ ಯುವಕ, ಯುವತಿಯರು ಅಧಿಕ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗುವ ಆತಂಕ ಎದುರಾಗಲಿದೆ. ವಿದ್ಯುತ್ ಸೌಲಭ್ಯ ಬಂಡವಾಳಶಾಹಿಗಳ ಅಧೀನಕ್ಕೆ ಒಳಪಟ್ಟರೆ ಅವರು ನಿಗದಿ ಪಡಿಸುವ ದರವನ್ನೇ ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ನೌಕರರು ಹೇಳಿದ್ದಾರೆ .