ಕೊಚ್ಚಿನ್, ಆಗಸ್ಟ್ 2 : ಕೇರಳದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮಾಜಿ ಪ್ರಾದ್ರಿಯೊಬ್ಬರ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮಹಿಳೆ ತನ್ನನ್ನು ಅತ್ಯಾಚಾರವೆಸಗಿದ ಅಪರಾಧಿಯನ್ನೇ ವಿವಾಹವಾಗಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಅದೇ ರೀತಿಯಲ್ಲಿ ಈ ಪ್ರಕರಣದ ಸಂಬಂಧ ನ್ಯಾಯಾಲಯದಿಂದ ಕಠಿಣ ಶಿಕ್ಷೆಗೊಳಗಾಗಿದ್ದ ಮಾಜಿ ಪಾದ್ರಿಯೊಬ್ಬರ ಜಾಮೀನು ಅರ್ಜಿಯನ್ನು ಕೂಡ ತಳ್ಳಿ ಹಾಕಿದೆ.
ಅತ್ಯಾಚಾರದ ಸಂತ್ರಸ್ತೆಗೆ ವಿವಾಹವಾಗುವ ಇಚ್ಛೆಯಿದ್ದರೂ ಕೂಡ ಆಕೆ ಅಪ್ರಾಪ್ತೆಯಾದ ಕಾರಣ ಕಾನೂನಿನಲ್ಲಿ ಅವಕಾಶವಿರಲಿಲ್ಲ. ಮಾತ್ರವಲ್ಲದೇ ಅತ್ಯಾಚಾರದಿಂದ ಆಕೆ ಗರ್ಭಿಣಿಯಾಗಿರುವುದರಿಂದ ಆಕೆಯನ್ನು ವಿವಾಹವಾಗುವ ನಿಟ್ಟಿನಲ್ಲಿ ಅನುಮತಿ ಕೋರಿ ಮಾಜಿ ಪಾದ್ರಿಯೊಬ್ಬರು ಜಾಮೀನು ಸಲ್ಲಿಸಿದ್ದರು. ಅಪ್ರಾಪ್ತೆಯಾದ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿರುವ ಕಾರಣ ನೀಡಿ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಅತ್ಯಾಚಾರಿಯ ಜೊತೆ ವಿವಾಹಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆಯು ವಿಚಾರಣಾ ನ್ಯಾಯಾಲಯದ ಮೊರೆ ಹೋಗಬಹುದೆಂದು ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠ ಸೋಮವಾರ ಸ್ಪಷ್ಟಪಡಿಸಿದೆ.