ನವದೆಹಲಿ, ಆಗಸ್ಟ್ 2: ಸಂಸತ್ತಿನಲ್ಲಿ ನಮ್ಮ ಬೇಡಿಕೆ ಈಡೇರುವಂತಾಗಲು ಮುಂದೆ ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು ಎಂಬುದನ್ನು ಚರ್ಚಿಸಲು ಮಂಗಳವಾರ ಬೆಳಿಗ್ಗೆ ಪ್ರತಿಪಕ್ಷಗಳ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮನೆಯಲ್ಲಿ ಬೆಳಿಗ್ಗೆ ಚಹಾ ಮಾತುಕತೆಯೊಂದನ್ನು ಹಮ್ಮಿಕೊಂಡಿದ್ದಾರೆ.
ಮುಂಗಾರು ಮಳೆಗಾಲದ ಸಂಸತ್ ಅಧಿವೇಶನವು ಮುಂದೂಡಿಕೆಯ ಸುಳಿಯಲ್ಲಿ ಬಿದ್ದಿರುವುದರಿಂದ ಪ್ರತಿಪಕ್ಷಗಳು ಸಂಸತ್ತಿನ ಹೊರಗೆ ಪರ್ಯಾಯ ಸಂಸತ್ ನಡೆಸಲು ಆಲೋಚಿಸುತ್ತಲಿವೆ. ಕಲಾಪ ನಡೆಯದ್ದು, ಪ್ರತಿಪಕ್ಷಗಳವರ ಪ್ರತಿಭಟನೆ ಹಾಗೂ ಬಹಿಷ್ಕಾರದಿಂದಾಗಿ ಆಳುವ ಪಕ್ಷದವರು ಹೇಳಿದ್ದಷ್ಟೆ ಸುದ್ದಿಯಾಗುತ್ತಿದೆ. ಆದ್ದರಿಂದ ಸಂಸತ್ತಿನ ಹೊರಗೆ ಅಣುಕು ಪಾರ್ಲಿಮೆಂಟ್ ನಡೆಸಲು ಹಲವು ಪ್ರತಿಪಕ್ಷಗಳವರು ಸಲಹೆ ನೀಡಿದ್ದಾರೆ.
ಇದು ಸರಕಾರದ ತಪ್ಪು, ಪೆಗಾಸಸ್ ಬಗೆಗೆ ಚರ್ಚಿಸಿದರೆ ಆಳುವವರ ಹುಳುಕು ಹೊರ ಬರುತ್ತದೆ ಎಂಬ ಅಂಜಿಕೆಯಿಂದ ಅವರು ಸಂಸತ್ ಮುಂದೂಡುವ ತಂತ್ರದ ಮೂಲಕ ಪೆಗಾಸಸ್ ಚರ್ಚೆ ನಡೆಯದಂತೆ ತಡೆದಿದ್ದಾರೆ ಎಂದು ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಪೆಗಾಸಸ್ ಚರ್ಚೆ ಒಂದರಿಂದಲೇ ಬಿಜೆಪಿ ಸರಕಾರದ ಗೌರವ ಮಣ್ಣುಪಾಲಾಗಲಿದೆ. ಚರ್ಚೆಗೆ ಸಿದ್ಧ ಎಂಬ ನಾಟಕದಲ್ಲೇ ದಿನ ದೂಡಲು ಬಿಜೆಪಿ ಸರಕಾರ ನಿರ್ಧರಿಸಿದೆ ಎಂದು ಖರ್ಗೆ ಟೀಕಿಸಿದರು.
ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಟ್ರಿಬ್ಯೂನಲ್ಲುಗಳ ಸುಧಾರಣಾ ಮಸೂದೆ ಮಂಡಿಸಿದ್ದಾರೆ. ಅದು ನ್ಯಾಯಾಧಿಕರಣಗಳನ್ನು ಇಲ್ಲವಾಗಿಸುತ್ತದೆ ಜೊತೆಗೆ ನಾನಾ ಕಾನೂನುಗಳ ಹಕ್ಕುಗಳನ್ನು ಮೊಟಕುಗೊಳಿಸಿ ನ್ಯಾಯ ವಿತರಣಾ ಕ್ರಮವನ್ನು ಊನಾಂಗವಾಗಿಸಲಿದೆ ಎಂದೂ ಅವರು ಹೇಳಿದರು.