ನವದೆಹಲಿ, ಜುಲೈ 31: ದೆಹಲಿ ಪ್ರವಾಸ ಯಶಸ್ಸು ಕಂಡಿದೆ ಮತ್ತು ಹೊಸ ರಾಜಕೀಯ ಭರವಸೆ ಮೂಡಿಸಿದೆಯೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಮಮತಾ ನೇತೃತ್ವದ ಟಿ.ಎಂ.ಸಿ ಪಕ್ಷ ಬಹುಮತ ಪಡೆಯುವ ಮೂಲಕ ದ್ವಿತೀಯ ಅವಧಿಗೆ ಅಧಿಕಾರದ ಗದ್ದುಗೆಗೇರಿದೆ. ಅದೇ ರೀತಿ ದೆಹಲಿ ಪ್ರವಾಸ ಮುಗಿಸಿ ತವರಿಗೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ನನ್ನ ಈ ದೆಹಲಿ ಪ್ರವಾಸವು ರಾಷ್ಟ್ರ ರಾಜಕೀಯದಲ್ಲಿ ಹೊಸ ಭರವಸೆ ತಂದಿದೆಯೆಂದು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ದೆಹಲಿ ಪ್ರವಾಸ ನಡೆಸಿದ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪ್ರತಿಪಕ್ಷದ ಹಲವಾರು ನಾಯಕರನ್ನು ಭೇಟಿಯಾಗಿದ್ದಾರೆ. ಮಾತ್ರವಲ್ಲ 2024 ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರವನ್ನು ಸೋಲಿಸುವ ನಿಟ್ಟಿನಲ್ಲಿ ಐಕ್ಯತೆಯನ್ನು ಪ್ರದರ್ಶಿಸುವ ಕುರಿತು ಪ್ರತಿಪಕ್ಷದ ಬಳಿ ಚರ್ಚೆ ನಡೆಸಿದ್ದಾರೆ.
ಮಮತಾ ಬ್ಯಾನರ್ಜಿ ಯವರ ದೆಹಲಿಯ ಈ ಭೇಟಿಯಿಂದಾಗಿ ರಾಷ್ಟ್ರ ರಾಜಕೀಯದಲ್ಲಿ ಹೊಸ ಒಂದು ಛಾಪು ಮೂಡಿದೆಯೆಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.