► ಜಾರ್ಖಂಡ್ ಬಳಿಕ ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ
ಲಕ್ನೋ, ಜು.31: ಜಾರ್ಖಂಡ್ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ವಾಹನ ಹರಿಸಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಇನ್ನೊಂದು ಆಘಾತಕಾರಿ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾರು ಅಪಘಾತದಲ್ಲಿ ಗಾಯಗೊಂಡ ಉತ್ತರ ಪ್ರದೇಶದ ನ್ಯಾಯಾಧೀಶ ಮುಹಮ್ಮದ್ ಅಹಮದ್ ಖಾನ್ ಅವರು ತಮ್ಮನ್ನು ಕೊಲ್ಲುವ ಪ್ರಯತ್ನ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿರುವ ಉತ್ತರ ಪ್ರದೇಶ ಪೊಲೀಸರು, ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮುಹಮ್ಮದ್ ಅಹ್ಮದ್ ಖಾನ್ ಅವರು ಉತ್ತರ ಪ್ರದೇಶದ ಫತೇಪುರದಲ್ಲಿ ದೂರು ದಾಖಲಿಸಿದ್ದಾರೆ. ಅವರು ತಮ್ಮ ದೂರಿನಲ್ಲಿ ಉದ್ದೇಶಪೂರ್ವಕವಾಗಿ ಎಸ್ ಯುವಿ ಡಿಕ್ಕಿ ಹೊಡೆಸಲಾಗಿದೆ. ಇದರಿಂದ ತಾನು ಗಾಯಗೊಂಡಿದ್ದು, “ಇದು ನನ್ನನ್ನು ಕೊಲ್ಲುವ ಪ್ರಯತ್ನ” ಎಂದು ಆಪಾದಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅವರು ವೈಯಕ್ತಿಕ ಪ್ರವಾಸದ ನಂತರ ಪ್ರಯಾಗರಾಜ್ ನಿಂದ ಫತೇಪುರ್ ಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನ್ಯಾಯಾಧೀಶರು ನೀಡಿದ ದೂರಿನಲ್ಲಿ, ವ್ಯಕ್ತಿಯೊಬ್ಬ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಆತ ಇತ್ತೀಚೆಗೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.