ಎರ್ನಾಕುಲಂ(ಕೇರಳ): ದಂತ ವೈದ್ಯಕೀಯ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಘಟನೆ ಕೇರಳದ ಎರ್ನಾಕುಳಂ ಜಿಲ್ಲೆಯ ಕೋತಮಂಗಲದ ನೆಲ್ಲಿಕುಳಿಯಲ್ಲಿ ನಡೆದಿದೆ.
ಇಂದಿರಾ ಗಾಂಧಿ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾನಸಾ (24) ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಕಣ್ಣೂರಿನ ನಿವಾಸಿಯಾದ ರಾಹಿಲ್ ಎಂಬ ಯುವಕ ಗುಂಡಿಕ್ಕಿ ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಹಿಲ್ ಮತ್ತು ಮಾನಸಾಗೆ ಈ ಹಿಂದೆ ಪರಿಚಯವಿತ್ತು. ಇಬ್ಬರ ಮಧ್ಯೆ ಸ್ನೇಹ ಇದ್ದ ಕಾರಣ ರಾಹಿಲ್ ಮಾನಸಾಳಿಗೆ ತನ್ನ ಪ್ರೇಮದ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಮಾನಸಾ ನಿರಾಕರಿಸಿದ್ದಾಳೆ. ಈ ವಿಷಯದ ಸಂಬಂಧ ಇಬ್ಬರಲ್ಲಿ ಬಿರುಕು ಮೂಡಿದೆ. ಆದರೂ ಸಹ ರಾಹಿಲ್ ತನ್ನನ್ನು ಪ್ರೀತಿಸುವಂತೆ ಮಾನಸಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ಇದರಿಂದ ಬೇಸತ್ತ ಮಾನಸಾ ರಾಹಿಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.ನಂತರ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿತ್ತು.
ಡೆಂಟಲ್ ಕಾಲೇಜಿನ ಬಳಿ ಮಾನಸಾ ವಾಸಿಸುತ್ತಿದ್ದ ಬಾಡಿಗೆ ಮನೆಗೆ ನಿನ್ನೆ ಏಕಾಏಕಿ ನುಗ್ಗಿದ ರಾಹಿಲ್ ಮಾನಸಾಳನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ರಾಹಿಲ್ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.