ಮೈಸೂರು: ಕೋವಿಡ್ ಮೂರನೇ ಅಲೆ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸುವಂತೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ಮೂರನೇ ಅಲೆ ಬರದಂತೆ ತಡೆಯಬೇಕಾಗಿರುವುದು ಸರಕಾರದ ಜವಾಬ್ದಾರಿ. ಯಾಕೆಂದರೆ ಕೇರಳದಲ್ಲಿ ಇದೀಗಾಲೇ ಮೂರನೇ ಅಲೆ ಪ್ರಾರಂಭವಾಗಿದೆ. ನಿನ್ನೆ 22 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೇರಳದಿಂದ ಕೊಡಗುಗೆ, ಚಾಮರಾಜನಗರಕ್ಕೆ ಮತ್ತು ಬೇರೆ ಬೇರೆ ಜಿಲ್ಲೆಗೆ ಜನರು ಬರುತ್ತಿದ್ದಾರೆ. ಬರುವ ಜನರನ್ನು ಅಲ್ಲಿ ತಪಾಸಣೆ ನಡೆಸಿ ಕರ್ನಾಟಕಕ್ಕೆ ಬರದ ರೀತಿಯಲ್ಲಿ ತಡೆಯುವುದು ಸರಕಾರದ ಕರ್ತವ್ಯ. ಇದನ್ನು ನಿರ್ವಹಿಸಲು ಸರಕಾರ ವಿಫಲವಾದರೆ ಕರ್ನಾಟಕದಲ್ಲೂ ಮೂರನೇ ಅಲೆ ಪ್ರಾರಂಭವಾಗುತ್ತದೆ. ಮೂರನೇ ಅಲೆ ಬರದೇ ಇರಬೇಕೆಂದರೆ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡಿನಿಂದ ಸೋಂಕು ಬರದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.
ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಕಢಿಣವಾದಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಸಂಪುಟವೇ ಇಲ್ಲ ಎಂದಾಗ ಇದು ಹೇಗೆ ಸಾಧ್ಯ ಎಂಬ ಸುದ್ದಿಗಾರರ ಪ್ರಶ್ನೆಗೆ, ಸಂಪುಟ ಇಲ್ಲದಿದ್ದರೇನು ಅಧಿಕಾರಿಗಳಿಲ್ವಾ?? ಅಧಿಕಾರಿಗಳ ಮೂಲಕ ಈ ಕ್ರಮಗಳನ್ನು ಕೈಗೊಳ್ಳಬೇಕು. ಅದೇ ರೀತಿ ಸಂಪುಟನೂ ಆದಷ್ಟು ಬೇಗ ರಚಿಸಬೇಕು, ಯಾಕೆಂದರೆ ಏಕ ವ್ಯಕ್ತಿ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.