ಬೆಂಗಳೂರು,ಜು.31: ಅಪರಾಧ ಕೃತ್ಯಗಳಲ್ಲಿ ಸಕ್ರಿಯರಾಗಿದ್ದ ರೌಡಿಗಳ ಮನೆ ಮೇಲೆ ಆಗ್ನೇಯ ವಿಭಾಗದ ಪೊಲೀಸರು ಇಂದು ಮುಂಜಾನೆಯಿಂದ ದಾಳಿ ನಡೆಸಿದ್ದಾರೆ.
ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ರೌಡಿಶೀಟರ್ ಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿರುವ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ಕೈಗೊಂಡಿದ್ದಾರೆ.
ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ 63 ರೌಡಿಶೀಟರ್ ಗಳ ಮನೆ ಮೇಲೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಗಿದೆ.
ಕುಖ್ಯಾತ ರೌಡಿಗಳಾದ ಸುಜೀತ್, ತೇಜಸ್, ಕಿಶೋರ್, ಸುರೇಶ್, ಅತಾವುಲ್ಲಾ, ಆನಂದ್, ಗೌತಮ್, ಮಣಿಕಾಂತ್, ಆನಂದ್ ಅಲಿಯಾಸ್ ಬ್ರಿಡ್ಜ್, ಶಿವ ಅಲಿಯಾಸ್ ಹಂದಿ ಶಿವ, ಅಂಬರೀಶ್, ಗೆಜ್ಜೆ ವೆಂಕಟೇಶ್ ಸೇರಿದಂತೆ 63 ರೌಡಿ ಶೀಟರ್ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ದಾಳಿಯಲ್ಲಿ 18 ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು ದಾಳಿಯಲ್ಲಿ ಯಾವುದೇ ರೀತಿಯ ಮಾರಕಾಸ್ತ್ರಗಳು ದೊರೆತಿಲ್ಲ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.