ಮಧ್ಯಪ್ರದೇಶ, ಜು.31: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿರುವ ಕಾರಾಗೃಹದ ಗೋಡೆಯೊಂದು ಕುಸಿದುಬಿದ್ದ ಪರಿಣಾಮ 22 ಖೈದಿಗಳು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಜಿಲ್ಲೆಯ ಜೈಲಿನ ಗೋಡೆ ಕುಸಿದು 22ಖೈದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸೆಲ್ ನಂಬರ್ 6 ರಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಘಟನೆಯಲ್ಲಿ 22ಖೈದಿಗಳು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡವರಿಗೆ ಗ್ವಾಲಿಯರ್ ನ ಉನ್ನತ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವೇಳೆ ಜೈಲಿನೊಳಗೆ 255 ಮಂದಿ ಖೈದಿಗಳಿದ್ದರು. ನಮಗೆ ಮಾಹಿತಿ ದೊರೆತ ಕೂಡಲೇ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಸಿಂಗ್ ತಿಳಿಸಿದ್ದಾರೆ.
ಜೈಲಿನ ಕಟ್ಟಡವು ತುಂಬಾ ಹಳೆಯದಾಗಿದ್ದು, ಕಳೆದ ಕೆಲ ದಿನಗಳಿಂದ ಸುದೀರ್ಘ ಮಳೆಯಾಗಿದ್ದರಿಂದ ಗೋಡೆ ಕುಸಿದು ಬಿದ್ದಿದೆ ಎಂದು ಹೇಳಿದ್ದಾರೆ.