ಮಿಝೋರಾಮ್ ಪ್ರಯಾಣ ಸುರಕ್ಷಿತವಲ್ಲ: ನಾಗರೀಕರಿಗೆ ಅಸ್ಸಾಮ್ ಸರ್ಕಾರ ಸಲಹೆ

Prasthutha|

ಗುವಾಹಟಿ ಜುಲೈ 30: ಅಸ್ಸಾಮ್ – ಮಿಝೋರಾಮ್ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಗಡಿ ವಿವಾದ ತಾರಕ್ಕೇರಿದೆ. ಈ ನಡುವೆ ಹಿಂಸಾತ್ಮಕ ಘರ್ಷಣೆಯಲ್ಲಿ ಅಸ್ಸಾಮ್ ನ ಆರು ಪೊಲೀಸ್ ಸಿಬ್ಬಂದಿಗಳು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ನಾಲ್ಕು ದಿನಗಳ ನಂತರ ಅಸ್ಸಾಮ್ ಸರ್ಕಾರ ಗುರುವಾರ, ಈ ಸಂದರ್ಭದಲ್ಲಿ ವೈಯಕ್ತಿಕ ದೃಷ್ಟಿಯಿಂದ ಮಿಝೋರಾಮ್ ಪ್ರಯಾಣ ಅಪಾಯಕಾರಿಯೆಂದು ಎಚ್ಚರಿಸಿದೆ. ಮಾತ್ರವಲ್ಲ ಮಿಝೋರಾಮ್ ಗೆ ಪ್ರಯಾಣಿಸದಂತೆ ರಾಜ್ಯದ ನಿವಾಸಿಗಳಿಗೆ ಸಲಹೆ ನೀಡಿದೆ.

- Advertisement -


ಈ ಮಧ್ಯೆ, ಅಂತಾರಾಜ್ಯ ಗಡಿಯಲ್ಲಿ ಅಸ್ಸಾಮ್ ಪೊಲೀಸ್ ಸಿಬ್ಬಂದಿಯ ತುಕಡಿಯನ್ನು ನಿಯೋಜಿಸಿರುವುದಕ್ಕೆ ಮಿಝೋರಾಮ್ ವಿರೋಧ ವ್ಯಕ್ತಪಡಿಸಿದೆ. ಪ್ರಸಕ್ತ ಅಸ್ಸಾಮ್ – ಮಿಝೋರಾಮ್ ಅಂತಾರಾಜ್ಯ ಗಡಿಯಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಸ್ಸಾಮ್ ಜನತೆ ಮಿಝೋರಾಮ್ ಪ್ರಯಾಣ ನಡೆಸದಂತೆ ಸೂಚಿಸಲಾಗಿದೆಯೆಂದು ಅಸ್ಸಾಮ್ ನ ಗೃಹ ಇಲಾಖೆ ಮತ್ತು ಆಡಳಿತ ವಿಭಾಗ ಸ್ಪಷ್ಟಪಡಿಸಿದೆ. ಕೆಲಸದ ನಿಮಿತ್ತ ಮಿಝೋರಾಮ್ ನಲ್ಲಿ ಉಳಿದಿರುವ ಅಸ್ಸಾಮ್ ಜನರು ಎಚ್ಚರಿಕೆಯನ್ನು ಪಾಲಿಸುವಂತೆ ಅಸ್ಸಾಮ್ ಸರ್ಕಾರ ಕೇಳಿಕೊಂಡಿದೆ.


ಮಿಝೋರಾಮ್ ರಾಜ್ಯದ ಕೆಲವು ನಾಗರಿಕ ಸಮಾಜ, ವಿಧ್ಯಾರ್ಥಿ ಮತ್ತು ಯುವ ಸಂಘಟನೆಗಳು ಅಸ್ಸಾಮ್ ರಾಜ್ಯ ಮತ್ತು ಜನತೆಯ ವಿರುದ್ಧ ಸತತವಾಗಿ ಪ್ರಚೋದನಕಾರಿ ಹೇಳಿಕೆಯನ್ನು ಹರಿಯ ಬಿಡುತ್ತಿದೆ. ಮಿಝೋರಾಮ್ ನ ಅನೇಕ ನಾಗರೀಕರು ಸ್ವಯಂಚಾಲಿತ ಶಸ್ತ್ರಗಳೊಂದಿಗೆ ಅಸ್ಸಾಮ್ ನ ಮೇಲೆ ದಾಳಿ ನಡೆಸಲು ಸಜ್ಜಿತರಾಗಿದ್ದಾರೆ ಎಂದು ಅಸ್ಸಾಂ ಪೊಲೀಸರ ಬಳಿಯಿರುವ ವಿಡಿಯೋ ತುಣುಕುಗಳಿಂದ ತಿಳಿದುಬಂದಿದೆ. ಆದ್ದರಿಂದ ಅಸ್ಸಾಮ್ ಜನತೆಯ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಿಝೋರಾಮ್ ಪ್ರಯಾಣಕ್ಕೆ ತಡೆಹಿಡಿಯಲಾಗಿದೆಯೆಂದು ಅಸ್ಸಾಮ್ ಸರ್ಕಾರ ಸ್ಪಷ್ಟಪಡಿಸಿದೆ.

- Advertisement -

ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲೈಲಾಪುರ (ಅಸ್ಸಾಂ) -ವೈರೆಂಗ್ಟೆ (ಮಿಜೋರಾಂ) ಗಡಿಯಲ್ಲಿ
ಶಾಂತಿಯುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲು ಆದೇಶಿಸಿದೆ.

ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗಳೊಂದಿಗೆ ಮಾತುಕತೆ ನಡೆಸಿ ಗಡಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಉಭಯ ರಾಜ್ಯಗಳು ಪರಸ್ಪರ ಚರ್ಚೆ ನಡೆಸುವಂತೆ ಸಲಹೆ ನೀಡಿದರು.


ಅದೇ ರೀತಿ ಗುರುವಾರ ಮುಖ್ಯಮಂತ್ರಿ ಹೊರಡಿಸಿರುವ ಅದೇಶದಲ್ಲಿ ಅಸ್ಸಾಮ್ ಸುರಕ್ಷತೆಯ ಹಿತದೃಷ್ಟಿಯಿಂದ ಮಿಝೋರಾಮ್ ಗಡಿ ಮೂಲಕ ಅಸ್ಸಾಮ್ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಅಸ್ಸಾಮ್ ಜನರ ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕಠಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಅದೇಶಿಸಿದ್ದಾರೆ.

ಗುರುವಾರ ಹಲವಾರು ಸಂಘಟನೆಗಳು ಪೊಲೀಸರ ಹತ್ಯೆಯ ವಿರುದ್ಧ ಗುವಾಹಟಿ ಮತ್ತು ಸಿಲ್ಚಾರ್ ಪ್ರದೇಶದ ಮಿಜೋರಾಂ ಹೌಸ್ ಮುಂದೆ ಪ್ರತಿಭಟನೆ ನಡೆಸಿದ್ದವು.



Join Whatsapp