ಮಂಗಳೂರು, ಜು.29: ಖಾಸಗಿ ಬಸ್ ಮಾಲಕರ ಸಂಘವು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಮೇರೆಗೆ ಜಿಲ್ಲಾಡಳಿತ ಏಕಪಕ್ಷೀಯವಾಗಿ ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತ ಏರಿಕೆ ಮಾಡಿದ ಆದೇಶ ಮಾಡಿದೆ. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮಂಗಳೂರು ನಗರ ಸಮಿತಿಯು ಹೋರಾಟಕ್ಕೆ ಕರೆ ನೀಡಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ಪಕ್ಷವು, ಕೊರೊನಾ ನಿರ್ಬಂಧ, ಸತತ ಲಾಕ್ ಡೌನ್ ನಿಂದಾಗಿ ಖಾಸಗಿ ಬಸ್ಸು ಮಾಲಕರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಖಾಸಗಿ ಬಸ್‌ಗಳನ್ನು ಪ್ರಯಾಣಕ್ಕಾಗಿ ಬಳಸುವವರು ಬಹುತೇಕ ಕೂಲಿ ಕಾರ್ಮಿಕರು, ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿದು ತಿನ್ನುವವರೇ ಜಾಸ್ತಿ. ಇಂತಹ ಬಡ ವಿಭಾಗಕ್ಕೆ ಖಾಸಗಿ ಬಸ್ ಪ್ರಯಾಣ ದರ ವಿಪರೀತ ಏರಿಕೆಯು ತೀವ್ರ ಹೊರೆಯಾಗಲಿದೆ ಎಂದಿದೆ.
ತಿಂಗಳ ಹಿಂದೆ ಖಾಸಗಿ ಬಸ್ ಮಾಲಕರು ಶೇಕಡಾ 20 ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಿದ ಸಂದರ್ಭದಲ್ಲೂ ಈ ದರ ಏರಿಕೆ ಪ್ರಸ್ತಾಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದವು. ಆಗಲೂ ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಮಂತ್ರಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆ ವೇಳೆ ಜಿಲ್ಲಾಡಳಿತ ದರ ಏರಿಕೆಗೆ ತಡೆ ನೀಡಿ ಪ್ರಾಧಿಕಾರದ ಸಭೆ ಕರೆದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆದೇಶಿಸಲಾಗಿತ್ತು. ಆದರೆ ಜಿಲ್ಲಾಡಳಿತವು ಅಂತಹ ಯಾವುದೇ ಸಭೆಯನ್ನು ಕರೆಯದೆ ಖಾಸಗಿ ಬಸ್ ಮಾಲಕರ ಪರವಾಗಿ ಬಸ್ ಪ್ರಯಾಣ ದರವನ್ನು ಸುಮಾರು ಶೇಕಡಾ 50ಕ್ಕಿಂತಲೂ ಹೆಚ್ಚಿಗೆ ಏರಿಸಿರುವುದು ಖಂಡನೀಯವಾಗಿದೆ ಎಂದು ಸಿಪಿಐ(ಎಂ) ಪಕ್ಷವು ಆರೋಪಿಸಿದೆ.
ಜಿಲ್ಲಾಡಳಿತವು ಈ ಕೂಡಲೇ ಏರಿಕೆ ಮಾಡಿರುವ ಬಸ್ ಪ್ರಯಾಣ ದರಕ್ಕೆ ತಡೆ ನೀಡಬೇಕು, ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿ ಜುಲೈ 31 ರ ಶನಿವಾರದಂದು ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಈ ಹೋರಾಟಕ್ಕೆ ಡಿವೈಎಫ್‌ಐ ಸಂಘಟನೆ ಒಳಗೊಂಡು ಜನಪರ ಸಂಘಟನೆಗಳು ಭಾಗಿಯಾಗಲಿವೆ ಎಂದು ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ನವೀನ್ ಕೊಂಚಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.