ಲಕ್ನೋ ಜುಲೈ 29: ಕಳೆದ ಕೆಲವು ಸಮಯದಿಂದ ಉತ್ತರ ಪ್ರದೇಶದ ಬ್ರಾಹ್ಮಣರು ತಮ್ಮ ಮೇಲಿನ ನಿರ್ಲಕ್ಷ್ಯ ಮತ್ತು ದಬ್ಬಾಳಿಕೆ ದೋರಣೆಯ ವಿರುದ್ಧ ನಿರಂತರ ದೂರು ನೀಡುತ್ತಲೇ ಬಂದಿದ್ದಾರೆ. ಕಳೆದ 4 ವರ್ಷಗಳಿಂದ ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಯುಪಿಯಲ್ಲಿ ಹಲವಾರು ಬ್ರಾಹ್ಮಣರನ್ನು ಕೊಲ್ಲಲಾಗಿದೆ ಎಂದು ಬ್ರಾಹ್ಮಣ ಸಮುದಾಯದ ಮುಖಂಡರು ಹೇಳಿಕೊಂಡಿದ್ದಾರೆ. ಈ ಹಿಂದೆ ದರೋಡೆಕೋರ ವಿಕಾಸ್ ದುಬೆ ಅವರ ಎನ್ಕೌಂಟರ್ ಹತ್ಯೆಯಲ್ಲಿ ಕೂಡ ಜಾತಿಬಣ್ಣ ಬಳಿಯಲಾಗಿತ್ತು. ಯುಪಿ ಅಸೆಂಬ್ಲಿ ಚುನಾವಣೆಗೆ ಏಳು ತಿಂಗಳು ಬಾಕಿಯಿರುವಾಗ ಎಲ್ಲಾ ರಾಜಕೀಯ ಪಕ್ಷಗಳು ಬ್ರಾಹ್ಮಣ ಸಮುದಾಯದ ಓಲೈಕೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯುಪಿಯಲ್ಲಿ ಬ್ರಾಹ್ಮಣರು ಬಹು ಬೇಡಿಕೆಯ ಸಮುದಾಯವಾಗಿ ಬದಲಾಗಿದೆ.
ಬ್ರಾಹ್ಮಣರ ಓಲೈಕೆಯ ಭಾಗವಾಗಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ರಾಜ್ಯದೆಲ್ಲೆಡೆ ಬ್ರಾಹ್ಮಣ ಸಮಾವೇಶ ನಡೆಸುತ್ತಿದೆ. ಅದೇ ರೀತಿ ಸಮಾಜವಾದಿ ಪಕ್ಷ (ಎಸ್ಪಿ) ಬ್ರಾಹ್ಮಣರಿಗಾಗಿ ಬೌದ್ಧಿಕ ಸಭೆಗಳನ್ನು ಆಯೋಜಿಸುತ್ತಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬ್ರಾಹ್ಮಣ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹುಡುಕಾಟ ನಡೆಸುತ್ತಿದೆ. ಈ ಮಧ್ಯೆ ಬ್ರಾಹ್ಮಣ ಸಮುದಾಯದ ಮೇಲಿನ ದೌರ್ಜನ್ಯದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಜಿತಿನ್ ಪ್ರಸಾದ್ ಅವರನ್ನು ಬಿಜೆಪಿ ಈಗಾಗಲೇ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ.
ಯುಪಿಯ ಒಟ್ಟು ಜನಸಂಖ್ಯೆಯ ಶೇಕಡಾ 12 ಮತ್ತು ವಿವಿಧ ಅಸೆಂಬ್ಲಿಯ ಶೇಕಡಾ 20 ಜನಸಂಖ್ಯೆಯನ್ನು ಹೊಂದಿರುವ ಬ್ರಾಹ್ಮಣ ಸಮುದಾಯಕ್ಕೆ ಈಗ ಬಹು ಬೇಡಿಕೆ ಯಾಗಿದೆ. ಬ್ರಾಹ್ಮಣ ಮತಗಳಿಂದ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ 2017 ರಿಂದ ಯೋಗಿಯವರು ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸುವ ಮೂಲಕ ಸರ್ಕಾರ ಉತ್ತರ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಕಾಸ್ ದುಬೆಯ ಎನ್ಕೌಂಟರ್ ಸೇರಿದಂತೆ 500ಕ್ಕೂ ಮಿಕ್ಕಿದ ಬ್ರಾಹ್ಮಣರನ್ನು ಹತ್ಯೆ ಮಾಡಲಾಗಿದೆಯೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ರಾಜೇಂದ್ರ ನಾಥ್ ತ್ರಿಪಥಿ ಆರೋಪಿಸಿದ್ದಾರೆ. ಈ ಹಿಂದಿನ ಸರ್ಕಾರ ಅವಧಿಯಲ್ಲಿ ಬ್ರಾಹ್ಮಣರ ಮೇಲಿನ ದೌರ್ಜನ್ಯ ನಡೆಯುತಿತ್ತು. ಆದರೇ ಯೋಗಿ ಸರ್ಕಾರದ ಅವಧಿಯಲ್ಲಿ ಅದು ಗಂಭೀರವಾಗಿದೆ ಎಂದು ಅವರು ದೂರಿದರು. ಯೋಗಿ ಸರ್ಕಾರದಲ್ಲಿ ಬ್ರಾಹ್ಮಣ ಪ್ರಾತಿನಿಧ್ಯ ಕಡಿಮೆ ಪ್ರಮಾಣದಲ್ಲಿರುವುದರಿಂದ ಅವರ ಪ್ರಭಾವ ಕ್ಷೀಣಿಸಿದೆ. ಯುಪಿ ಸರ್ಕಾರದಲ್ಲಿ 53 ಸದಸ್ಯರ ಸಂಪುಟದಲ್ಲಿ ಕೇವಲ ಒಂಬತ್ತು ಮಂದಿ ಬ್ರಾಹ್ಮಣರು ಶಾಸಕರಿದ್ದಾರೆ. ಅದರಲ್ಲಿ ದಿನೇಶ್ ಶರ್ಮಾ, ಶ್ರೀಕಾಂತ್ ಶರ್ಮಾ ಮತ್ತು ಬೃಜೇಶ್ ಪಾಠಕ್ ರವರು ಕ್ರಮವಾಗಿ ಉನ್ನತ ಮತ್ತು ದ್ವಿತೀಯ ಶಿಕ್ಷಣ, ವಿಧ್ಯುಚಕ್ತಿ ಮತ್ತು ಕಾನೂನು ಸಚಿವಾಲಯವನ್ನು ಅಲಂಕರಿಸಿದ್ದಾರೆ. ಉಳಿದಂತೆ ಸಣ್ಣ ಖಾತೆಗಳನ್ನು ಹಂಚಿರುವ ಯೋಗಿಯವರು ಇವರನ್ನು ದೂರ ಇರಿಸಲು ತೊಡಗಿದ್ದಾರೆ. ಈ ಬೆಳವಣಿಗೆ ಯೋಗಿ ಸರ್ಕಾರದ ವಿರುದ್ಧ ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಎಲ್ಲಾ ಹಿನ್ನೆಲೆಯನ್ನು ಅವಲೋಕಿಸಿದಾಗ ಯೊಗಿ ಸರ್ಕಾರ ಬ್ರಾಹ್ಮಣರನ್ನು ಕಡೆಗಣಿಸುವುದನ್ನು ಪ್ರಮುಖ ಅಸ್ತ್ರವಾಗಿ ಉಪಯೋಗಿಸಿದ ಪ್ರತಿಪಕ್ಷಗಳು ಯೋಗಿ ಸರ್ಕಾರದ ಬ್ರಾಹ್ಮಣ ವಿರೋಧಿ ನಡೆಯನ್ನು ಜನರ ಮುಂದೆ ತೆರೆದಿಡುವ ಪ್ರಯತ್ನ ನಡೆಸುತ್ತಿದೆ. ಯುಪಿಯಲ್ಲಿ ಶೇಕಡಾ 12 ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯ ನಿರ್ಣಾಯಕ ಶಕ್ತಿಯಾಗಿ ಹೊರ ಹೊಮ್ಮಲಿದೆಯೆಂದು ಬ್ರಾಹ್ಮಣ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಯುಪಿ ಚುನಾವಣಾ ರಂಗ ಕಾವೇರಿದ್ದು, ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ರಣತಂತ್ರ ರೂಪಿಸುತ್ತಿದೆ.