ಇತರ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಬೆಳೆದು ಅಧಿಕಾರ ನಡೆಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಜೆಡಿಎಸ್ ಗೆ ಇದು ಸಾಧ್ಯವಾಗಲೇ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಬಹುಮತ ಬಾರದಿದ್ದಾಗ ಜೆಡಿಎಸ್ ಗೆ ಊರುಗೋಲಿನ ಪಾತ್ರವನ್ನು ನಿರ್ವಹಿಸಲಷ್ಟೇ ಸಾಧ್ಯವಾಗಿದೆ. ರಾಜ್ಯದಲ್ಲಿ ಹಲವು ಬಾರಿ ಪರ್ಯಾಯ ರಾಜಕಾರಣವಾಗಿ ಬೆಳೆಯುವ ವಾತಾವರಣ ನಿರ್ಮಾಣವಾಗಿದ್ದರೂ, ಜೆಡಿಎಸ್ ಈ ಅವಕಾಶಗಳನ್ನು ಬಳಸಿಕೊಂಡು ಬೆಳೆಯಲಿಲ್ಲ ಎಂಬದು ಈಗ ಇತಿಹಾಸ.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕರ್ನಾಟಕದಲ್ಲಿ ದಿನೇ ದಿನೇ ಅಧಃಪತನಕ್ಕೆ ಇಳಿಯುತ್ತಿದೆ. ಇದಕ್ಕೆ ಪಕ್ಷದ ನಾಯಕತ್ವದ ದ್ವಂದ್ವ ನಿಲುವುಗಳು, ಅಧಿಕಾರದ ಬಗ್ಗೆ ಅದಕ್ಕಿರುವ ಅತ್ಯಾಸೆ, ಸ್ಪಷ್ಟ ಸಿದ್ಧಾಂತ ಇಲ್ಲದಿರುವುದು ಇತ್ಯಾದಿ ಈಗಾಗಲೇ ಹಲವರು ಮಾಡಿರುವ ‘ಕಾರಣಗಳ ಪಟ್ಟಿ’ಗೆ ಸೇರಿಸಬಹುದು. ಇತರ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಬೆಳೆದು ಅಧಿಕಾರ ನಡೆಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಜೆಡಿಎಸ್ ಗೆ ಇದು ಸಾಧ್ಯವಾಗಲೇ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಬಹುಮತ ಬಾರದಿದ್ದಾಗ ಜೆಡಿಎಸ್ ಗೆ ಊರುಗೋಲಿನ ಪಾತ್ರವನ್ನು ನಿರ್ವಹಿಸಲಷ್ಟೇ ಸಾಧ್ಯವಾಗಿದೆ. ರಾಜ್ಯದಲ್ಲಿ ಹಲವು ಬಾರಿ ಪರ್ಯಾಯ ರಾಜಕಾರಣವಾಗಿ ಬೆಳೆಯುವ ವಾತಾವರಣ ನಿರ್ಮಾಣವಾಗಿದ್ದರೂ, ಜೆಡಿಎಸ್ ಈ ಅವಕಾಶಗಳನ್ನು ಬಳಸಿಕೊಂಡು ಬೆಳೆಯಲಿಲ್ಲ ಎಂಬದು ಈಗ ಇತಿಹಾಸ. ಭವಿಷ್ಯದಲ್ಲೂ ಈ ಸಾಧ್ಯತೆಗಳು ಕ್ಷೀಣ.
ವಿವಾದಾತ್ಮಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ವಿಷಯಗಳಲ್ಲಿ ಜೆಡಿಎಸ್ ನ ದ್ವಂದ್ವ ನಿಲುವು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಈ ಕಾಯ್ದೆಗಳ ಬಗ್ಗೆ ಪಕ್ಷದ ಶಾಸಕಾಂಗ ಪಕ್ಷದ ನಾಯಕರು ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ “ ಹಾವು ಸಾಯಲೂ ಬಾರದು, ಕೋಲು ಮುರಿಯಲೂ ಬಾರದು” ಎಂಬಂತೆ ಮಾತನಾಡಿದರು. ರೈತರ ಹೋರಾಟದೊಂದಿಗೆ ದೃಢವಾಗಿ ನಿಲ್ಲಲು ಪಕ್ಷ ಹಿಂದೇಟು ಹಾಕಿತ್ತು. ಪಕ್ಷದ ವರಿಷ್ಠ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಹಿರಂಗವಾಗಿ ರೈತರ ಹೋರಾಟಕ್ಕೆ ಕೊನೆ ಗಳಿಗೆಯಲ್ಲಿ ಬೆಂಬಲ ನೀಡಿದ್ದರೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟ ನಿಲುವು ಪ್ರಕಟಿಸಲಿಲ್ಲ. ಸದನದ ಹೊರಗೆ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ಕೆಲವು ಸಲಹೆಗಳನ್ನು ನೀಡಿ ಸ್ವಾಗತಿಸುವಂತೆಯೂ, ವಿರೋಧಿಸುವಂತೆಯೂ ಮಾಡಿರುವುದು ಪಕ್ಷದ ಕಾರ್ಯಕರ್ತರಲ್ಲೇ ಅಚ್ಚರಿಗೆ ಕಾರಣವಾಯಿತು.
ವಿಧೇಯಕ ಜಾರಿಗೊಳಿಸದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಾಸನದಲ್ಲಿ ಹೋರಾಟ ನಡೆಸಿದರೆ, ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ವಿಧೇಯಕವನ್ನು ಸ್ವಾಗತಿಸಿ, ಕೆಲವೊಂದು ಲೋಪದೋಷಗಳನ್ನು ಸರಿಪಡಿಸುವಂತೆ ಸಲಹೆ ನೀಡಿದ್ದರು. ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ಕಾಯ್ದೆಯ 79 ಎ, ಬಿ ಕಲಂನಲ್ಲಿ ಕೆಲವು ನ್ಯೂನತೆಗಳು ಇವೆ. ಕೆಲವರು ಇದನ್ನು ದ್ವೇಷಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಧೇಯಕ ಜಾರಿಯಾದರೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ವಿಧೇಯಕವನ್ನು ಸ್ವಾಗತಿಸುತ್ತೇನೆ ಎಂದು ಹೇಳಿರುವುದು ಕುಮಾರಸ್ವಾಮಿಯವರ ಇತಿಹಾಸ ಅರಿತವರಿಗೆ ಅಚ್ಚರಿಯಾಗಿ ಕಂಡಿಲ್ಲದಿದ್ದರೂ ಜೆಡಿಎಸ್ ನ “ತೆನೆ ಹೊತ್ತ” ಮಹಿಳೆಗೆ ಮಾತ್ರ ಆಘಾತವುಂಟು ಮಾಡಿದ್ದು ಸುಳ್ಳಲ್ಲ.
ಈ ಎಲ್ಲಾ ಪ್ರಸಂಗ ನಡೆದ ಸಂದರ್ಭದಲ್ಲೇ ಮೂರು ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿರುವುದು, ಅವರ ಈ ನಿಲುವು ಬದಲಾಗಲು ಕಾರಣ ಎಂಬ ಚರ್ಚೆ ವಿಧಾನಸಭೆ ಮೊಗಸಾಲೆಯಲ್ಲಿ ನಡೆಯುತ್ತಿತ್ತು. ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ, ಇದೊಂದು ಸಾಮಾನ್ಯ ಭೇಟಿ ಎಂದು ಕುಮಾರಸ್ವಾಮಿ ಹೇಳಿದ್ದರೂ ಈ ಮೂಲಕ ಉಭಯ ನಾಯಕರು ಯಾರಿಗೆ ಸಂದೇಶ ನೀಡಲು ಬಯಸಿದ್ದರೋ ಅವರಿಗೆ ಸುಸೂತ್ರವಾಗಿ ಸಂದೇಶ ರವಾನಿಸಿದ್ದಾರೆ.
ಯಡಿಯೂರಪ್ಪ ಅವರೊಂದಿಗೆ ಸೇರಿ ತಾವು ಸರ್ಕಾರ ರಚಿಸಲು ಸಿದ್ಧ ಎಂಬ ಸಂದೇಶವನ್ನು ಕಾಂಗ್ರೆಸ್ ನಾಯಕರಿಗೆ, ಕುಮಾರಸ್ವಾಮಿ ರವಾನಿಸಿದರೆ, ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದರೆ ಜೆಡಿಎಸ್ ಬೆಂಬಲ ಪಡೆಯುತ್ತೇನೆ ಎಂಬ ಸಂದೇಶವನ್ನು ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಗೂ ಕಳುಹಿಸಿದ್ದಾರೆ. ಈ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದ ಕಾಂಗ್ರೆಸ್ , ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ಕೂಡ ಕಾಕತಾಳೀಯವೇನಲ್ಲ. ನೀವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ, ತಾವು ಸರ್ಕಾರದ ಬೆಂಬಲಕ್ಕೆ ಇದ್ದೇವೆ ಎಂಬ ಪರೋಕ್ಷ ಸಂದೇಶವನ್ನು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ರವಾನಿಸಿದ್ದಾರೆ.
ಹಿಂದಿನಿಂದಲೂ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಕೊಡು-ಕೊಳ್ಳು ನೀತಿಯನ್ನು ಅನುಸರಿಸಿಕೊಂಡು ಬರುತ್ತಿರುವುದನ್ನು ರಾಜ್ಯದ ಜನ ಕಂಡಿದ್ದಾರೆ. ಈಗಲೂ ಅದು ಮುಂದುವರಿದಿದೆ. ಇತರೆಲ್ಲಾ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿದ್ದರೆ ಕುಮಾರಸ್ವಾಮಿ ಹೇಳಿದ ಕ್ಷೇತ್ರಗಳಿಗೆ ಅನುದಾನ ಹರಿದು ಬಂದಿದೆ. ಇದೇ ವೇಳೆ ರಾಜ್ಯಸಭಾ ಸದಸ್ಯರಾಗಿ ನೂತನವಾಗಿ ಆಯ್ಕೆಯಾದವರಿಗೆ ಸಾಮಾನ್ಯವಾಗಿ ನೀಡುವ ಇನ್ನೋವಾ ಕಾರಿನ ಬದಲಾಗಿ ಜೆಡಿಎಸ್ ನ ನೂತನ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರಿಗೆ 75 ಲಕ್ಷ ರೂಪಾಯಿ ಮೌಲ್ಯದ Volvo XC60 D5 ಮಾಡೆಲ್ ಕಾರು ನೀಡಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಈ ಮಧ್ಯೆ ಮುಖ್ಯಮಂತ್ರಿ ಪುತ್ರ ಕೂಡ ದೇವೇಗೌಡರ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ. ಇವೆಲ್ಲವೂ ಕೊಡು-ಕೊಳ್ಳು ಒಪ್ಪಂದದ ಭಾಗವಾಗಿಯೇ ನಡೆದಿದೆ. ಇದರಿಂದಾಗಿಯೇ ಅವಿಶ್ವಾಸ ನಿರ್ಣಯದ ವೇಳೆ ಮುಖ್ಯಮಂತ್ರಿಯವರು ಇನ್ನಷ್ಟು ಉತ್ಸಾಹದಲ್ಲಿ ಇರುವಂತೆ ಕಂಡುಬಂದರು.
ಕೋಮುವಾದಿ ಪಕ್ಷವನ್ನು ಆಂತರಿಕವಾಗಿ, ಬಹಿರಂಗವಾಗಿ, ಬಾಹ್ಯವಾಗಿ, “ಅನಿವಾರ್ಯ”ವಾಗಿ ಬೆಂಬಲಿಸುವುದು ಕೂಡ ಜಾತ್ಯತೀತ ಸಿದ್ಧಾಂತಕ್ಕೆ ವಿರುದ್ಧವಾದುದು ಎಂಬ ಕನಿಷ್ಠ ಪ್ರಜ್ಞೆಯನ್ನೂ ಹೊಂದಿಲ್ಲದ ಪಕ್ಷವೊಂದು ತನ್ನನ್ನು ಜಾತ್ಯತೀತ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಜೆಡಿಎಸ್ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಅಥವಾ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದೊಂದಿಗೆ ವಿಲೀನವಾಗುವ ಸಾಧ್ಯತೆಯೇ ಹೆಚ್ಚು.