ಸರಕಾರದ ‘ದೇವರ ಆಟ’ | ಅನ್ನದಾತನ ಪರದಾಟ

Prasthutha|

-ಎನ್. ರವಿಕುಮಾರ್

- Advertisement -

ರೈತ ಸಮುದಾಯ ಸಂಘಟಿತ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತಿದ್ದ ಎಪಿಎಂಸಿ ಮಾರುಕಟ್ಟೆಗೆ ರೈತರು ಬಂದಾಗ ಅನ್ಯಾಯಗಳನ್ನು ಪ್ರತಿಭಟಿಸಿ, ಸೂಕ್ತ ನ್ಯಾಯವನ್ನು ಪಡೆಯುತ್ತಿದ್ದರು. ಈಗ ರೈತನ ಮನೆ ಬಾಗಿಲುಗಳಲ್ಲೇ ವ್ಯಾಪಾರ ನಡೆಯುವುದರಿಂದ ರೈತರು ಏಕಾಂಗಿಗಳಾಗುತ್ತಾರೆ.

 ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ರೈತ ಸಂಬಂಧಿತ ಮೂರು ಕಾಯ್ದೆಗಳಿಗೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವ ಮೂಲಕ ಇದೊಂದು ಐತಿಹಾಸಿಕ ಕ್ಷಣವೆಂದೇ ಪ್ರಧಾನಿ ಮೋದಿ ಅವರು ಬಣ್ಣಿಸಿಕೊಂಡಿದ್ದಾರೆ. ಮೋದಿ ಅವರ ಬೆಂಬಲವಾಗಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಕೂಡ ರೈತ ಸಂಬಂಧಿತ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಅನುಮೋದನೆಗೆ ಮುಂದಾಗಿದ್ದು, ಜೊತೆಗೆ ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ ತರುವ ಮೂಲಕ ಮಸೂದೆಯನ್ನು  ರೂಪಿಸಿದೆ.

- Advertisement -

ದೇಶದ ಕೃಷಿ ಮತ್ತು ಸಂಬಂಧಿತ ವಲಯ ಅತ್ಯಂತ ಬಿಕ್ಕಟ್ಟು ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಕೇಂದ್ರ ತಂದಿರುವ ಕೃಷಿ ಸಂಬಂಧಿತ ಮಸೂದೆಗಳು ರೈತರನ್ನು  ಸಂಕಷ್ಟ, ಬಿಕ್ಕಟ್ಟುಗಳಿಂದ ಪಾರು ಮಾಡಬಲ್ಲವೇ? ಎಂಬ ಪ್ರಶ್ನೆ ದೇಶದ ಮುಂದಿದೆ. ರೈತರ ಸಬಲೀಕರಣಕ್ಕೆ ಈ ಮಸೂದೆಗಳು ವರದಾನವಾಗಲಿವೆ, ರೈತನ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದಕ್ಕಲಿದೆ. ರೈತರ ಹಿತ ಕಾಯುವಲ್ಲಿ ಕ್ರಾಂತಿಕಾರಿ ನಿರ್ಧಾರ ಎನ್ನುವ  ಕೇಂದ್ರ ಸರಕಾರದ ಉದ್ದೇಶ ನಿಜವೇ ಆಗಿದ್ದರೆ ಕಾಯ್ದೆಯ ತಿದ್ದುಪಡಿ ಮಸೂದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸುವ ಔಚಿತ್ಯವಾದರೂ ಏನಿತ್ತು? ಎಂಬ ಮಿಲಿಯನರ್ ಪ್ರಶ್ನೆಗಳನ್ನು ಬಲವಂತವಾಗಿ ಹತ್ತಿಕ್ಕಲಾಗುತ್ತಿದೆ.

ಎನ್ಡಿಎ ಸರಕಾರದ ಮಿತ್ರಪಕ್ಷವಾದ ಅಕಾಲಿದಳ ಈ ಮಸೂದೆಗಳನ್ನು ವಿರೋಧಿಸಿದ್ದು,  ಕೇಂದ್ರ ಸಚಿವರಾಗಿದ್ದ ಹರ್ ಸಿಮ್ರತ್ ಕೌರ್ ಬಾದಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಂಜಾಬ್ನಲ್ಲಿ ಭುಗಿಲೆದ್ದಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ದೇಶದಾದ್ಯಂತ ರೈತರು, ಕೃಷಿ ಕಾರ್ಮಿಕರು ಮಸೂದೆಗಳ ವಿರುದ್ಧ ಪ್ರತಿಭಟನೆಗಿಳಿದಿರುವಾಗ ರೈತರನ್ನು ವಿಪಕ್ಷಗಳು ದಿಕ್ಕು ತಪ್ಪಿಸುತ್ತಿವೆ ಎಂದು ಮೋದಿ ಸರಕಾರ ವಸಾಹತುಕಾರನ ಭಾಷೆಯನ್ನು ಆಡುತ್ತಿದೆ. ಕಂಗನಾ ಎಂಬ ಬಾಲಿವುಡ್ ಅವಿವೇಕಿ ನಟಿಯೊಬ್ಬಳು ರೈತರನ್ನು ಭಯೋತ್ಪಾದಕರು ಎಂದು ಕರೆಯುವ ಮೂಲಕ ಅನ್ನದಾತನನ್ನು ಅವಮಾನಿಸುತ್ತಾಳೆ.

ಬಿಕ್ಕಟ್ಟಿನಲ್ಲಿರುವ ಕೃಷಿಯನ್ನು ಮತ್ತು ರೈತಾಪಿ ಬದುಕನ್ನು ಸಂಕಷ್ಟಗಳಿಂದ ವಿಮೋಚನೆ ಮಾಡುವುದೇ ಸರಕಾರದ ಆಶಯವಾಗಿದ್ದರೆ ಕೃಷಿ ಸಂಬಂಧಿತ ವಿಷಯಗಳಲ್ಲಿ ನೇರವಾಗಿ ಸಂಬಂಧ ಹೊಂದಿರುವ ರಾಜ್ಯ ಸರಕಾರಗಳ ಜೊತೆ ಯಾಕೆ ಸಮಾಲೋಚನೆ ನಡೆಸದೆ ಸುಗ್ರೀವಾಜ್ಞೆ ಮೂಲಕ ಮಸೂದೆ ಮಂಡಿಸುವ ಅಗತ್ಯವಾದರೂ ಏನಿತ್ತು? ಕೃಷಿ ಭೂಮಿ ಹಿಡುವಳಿ ವಿಷಯಗಳು ನೇರವಾಗಿ ರಾಜ್ಯಕ್ಕೆ ಸಂಬಂಧಿಸಿದ್ದಾಗಿವೆ. ಕೃಷಿ ಮಾರುಕಟ್ಟೆಯ ಕೆಲವು ವಿಷಯಗಳು ಕೇಂದ್ರ ಮತ್ತು ರಾಜ್ಯದ ಸಮವರ್ತಿ ಪಟ್ಟಿಯಲ್ಲಿವೆ. ಇಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಹಮತದಿಂದ ತೀರ್ಮಾನ ಕೈಗೊಳ್ಳಬೇಕು. ಆದರೆ  ಕೇಂದ್ರ ಸರಕಾರ ರಾಜ್ಯಗಳ ಅಭಿಪ್ರಾಯಗಳನ್ನು ಕೇಳದೆ ಸರ್ವಾಧಿಕಾರಿಯಂತೆ  ವರ್ತಿಸುತ್ತಿದೆಯಾದರೂ ಏಕೆ? ಎಂಬ ಅನುಮಾನ ದೇಶದ ರೈತರನ್ನು ಕಾಡುತ್ತಿದೆ. ಇಂದು ಕೃಷಿ ಅತ್ಯಂತ ಬಿಕ್ಕಟ್ಟಿನ ಕಾಲಘಟ್ಟದಲ್ಲಿರುವಾಗ ಮೋದಿ ಸರಕಾರ ಸರ್ವಾಧಿಕಾರಿ ಸ್ವರೂಪವಾಗಿ ತಂದಿರುವ ತಿದ್ದುಪಡಿ ಮಸೂದೆಗಳಿಂದ ರೈತರಿಗೆ ಸಂಕಷ್ಟಗಳಿಂದ ವಿಮೋಚನೆ ಸಾಧ್ಯವೆ ಎಂದು ನೋಡುವಾಗ ಅಂತಹ ಯಾವ ಭರವಸೆಗಳೂ ಕಾಣುತ್ತಿಲ್ಲ. ಬೀಜ, ವಿದ್ಯುತ್, ಗೊಬ್ಬರ, ಮಾರುಕಟ್ಟೆ ವ್ಯವಸ್ಥೆ, ಅನಿಯಂತ್ರಿತ ಬೆಲೆಗಳಿಂದ ಈಗಾಗಲೆ ನೋವು, ನಷ್ಟ ಉಣ್ಣುತ್ತಾ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿರುವಾಗ ಕೇಂದ್ರ ಸರಕಾರ  ರೂಪಿಸಿರುವ  ಮಸೂದೆಗಳಿಂದ ಪರಿಹಾರ ಸಿಕ್ಕುವುದಕ್ಕಿಂತ ರೈತರನ್ನು ಕಾರ್ಪೋರೇಟ್ ವಲಯದ ವಿಷ ವರ್ತುಲಕ್ಕೆ ಸಿಲುಕಿಸುವ ದೊಡ್ಡ ಹುನ್ನಾರವೊಂದು ಅಡಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ರೈತ ಸಮುದಾಯ  ತಾನು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ನಿಖರ ಮಾರುಕಟ್ಟೆಗಳಿಲ್ಲದೆ, ದಲ್ಲಾಳಿಗಳ ಶೋಷಣೆಗೆ ತುತ್ತಾಗಿ ನಲುಗುತ್ತಿದೆ. ಅಂತರರಾಷ್ಟೀಯ ಬೀಜ, ಗೊಬ್ಬರ, ಕ್ರಿಮಿನಾಶಕ ಕಂಪನಿಗಳು ರೈತರನ್ನು ಮನಸ್ಸೋಃ ಇಚ್ಛೆ ಸುಲಿಗೆ ಮಾಡುತ್ತಿದ್ದರೆ, ಬರ, ನೆರೆಗಳಂತಹ ಪ್ರಾಕೃತಿಕ ಅವಘಡಗಳು ಬಾಧಿಸುತ್ತಲೆ ಇವೆ.  ಸಾಲ ಮನ್ನಾ, ಬಡ್ಡಿ ಮನ್ನಾ, ಬೆಂಬಲ ಬೆಲೆ ಎಂಬ ಯೋಜನೆಗಳನ್ನು ಜಾರಿಗೊಳಿಸುವ ಸರಕಾರಗಳು  ರೈತರನ್ನು ಮೂಲಭೂತವಾಗಿ ಕಾಡುತ್ತಿರುವ  ಗುಣಮಟ್ಟದ ಬೀಜ,  ಪರಿಣಾಮಕಾರಿ ಔಷಧ, ವೈಜ್ಞಾನಿಕ ಬೆಲೆ, ನಿಖರ ಮಾರುಕಟ್ಟೆಗಳನ್ನು ಒದಗಿಸುವಲ್ಲಿ ವಿಫಲವಾಗಿವೆ. ರೈತರನ್ನು ಸುಲಿಗೆ ಮಾಡುತ್ತಿರುವ ಕಂಪನಿ, ದಲ್ಲಾಳಿಗಳನ್ನು ಮಟ್ಟ ಹಾಕುವಲ್ಲಾಗಲಿ ಕಾನೂನು ರೂಪಿಸಿ ರೈತರ ಬದುಕಿಗೆ ಆಸರೆ ಆಗಬೇಕಾದ ಸರಕಾರ ಇಂತಹ ಹೊಣೆಗಾರಿಕೆಯನ್ನು ಪ್ರದರ್ಶಿಸದೆ ರೈತನನ್ನು ಸಾಲಗಾರರನ್ನಾಗಿಸಿ, ಬಂಡವಾಳಶಾಹಿಗಳ ಜೀತಕ್ಕೆ ದೂಡುವ ಅದರಲ್ಲೆ ಆತ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯವಸ್ಥೆಯೊಂದು ಕಟ್ಟಿಕೊಟ್ಟಿರುವುದನ್ನು ಕಾಣುತ್ತಿದ್ದೇವೆ. ಇಂತಹ ಬಿಕ್ಕಟ್ಟುಗಳಿಂದ ರೈತರನ್ನು ಪಾರು ಮಾಡಬೇಕಾದ ಸರಕಾರ ಕೃಷಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ತರುವ ಮೂಲಕ ಕುದಿವ ಬಾಣಲೆಯಲ್ಲಿ ಬೇಯುತ್ತಿರುವ ರೈತರನ್ನು ಉರಿವ ಬೆಂಕಿಗೆ ಎಸೆವ ಅಮಾನುಷ ನೀತಿಯನ್ನು ಅನುಸರಿಸ ಹೊರಟಿರುವುದು ಈ ದೇಶದ ದೌರ್ಭಾಗ್ಯ.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ ಮತ್ತು ನೆರವು) ಮಸೂದೆ, ಬೆಲೆ ಖಾತರಿ ಹಾಗೂ  ಬೇಸಾಯ ಸೇವೆಗಳಿಗೆ ರೈತರ ಒಪ್ಪಂದ(ಸಶಕ್ತೀಕರಣ ಹಾಗೂ ರಕ್ಷಣೆ), ಅಗತ್ಯ ಸರಕುಗಳ ಮಸೂದೆ(ತಿದ್ದುಪಡಿ) ಕಾಯ್ದೆಗಳ ಪ್ರಕಾರ ಇನ್ನೂ ಮುಂದೆ ರೈತ ತಾನು ಬೆಳೆದ ಉತ್ಪನ್ನವನ್ನು ಎಪಿಎಂಸಿಗೆ ತಂದು ಮಾರಬೇಕೆಂಬ ನಿಯಮ ಕಡ್ಡಾಯವಲ್ಲ. ಎಪಿಎಂಸಿಗೆ ಪರ್ಯಾಯವಾಗಿ ತಲೆ ಎತ್ತುವ ಮುಕ್ತ ಮಾರುಕಟ್ಟೆಯನ್ನು ಪ್ರವೇಶಿಸಲು ನಿರ್ಬಂಧವಿರುವುದಿಲ್ಲ. ಈಗಿರುವ ಕನಿಷ್ಟ ಬೆಂಬಲ ಬೆಲೆ(MSP)  ವ್ಯವಸ್ಥೆ ರದ್ದಾಗುವುದಿಲ್ಲ, ‘ಸ್ಪರ್ಧಾತ್ಮಕ ಮಾರುಕಟ್ಟೆ ನಿರ್ಮಾಣವಾಗುವುದರಿಂದ ರೈತನ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ಸಿಗುವ ವಿಫುಲ ಅವಕಾಶಗಳ ಬಾಗಿಲು ತೆರೆದಂತಾಗುತ್ತದೆ.’ ಉತ್ಪನ್ನ ಮಾರಾಟ ಆದ ತಕ್ಷಣವೇ ಹಣ ಕೈ ಸೇರಬಹುದು, ರೈತನ ಮನೆ ಬಾಗಿಲಿಗೆ ಖರೀದಿದಾರ ಬರುವುದರಿಂದ ಸಾಗಾಣಿಕಾ ವೆಚ್ಚದ ಹೊರೆಯಿಂದ ರೈತ ಪಾರಾಗಬಹುದು, ಈ ಕಾಯ್ದೆಗಳ ಪರಿಣಾಮ ತಾತ್ಕಾಲಿಕ ಹಿತಾನುಭವವನ್ನು ಕೊಡುವುದಷ್ಟೆ ಆಗಿದೆ. ದೂರಗಾಮಿ ಪರಿಣಾಮಗಳು ಭೀಕರ ಮತ್ತು ಮರಣ ಶಾಸನವೇ ಆಗಿದೆ.

ರೈತ ಸಮುದಾಯ ಸಂಘಟಿತ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತಿದ್ದ ಎಪಿಎಂಸಿ ಮಾರುಕಟ್ಟೆಗೆ ರೈತರು ಬಂದಾಗ ಅನ್ಯಾಯಗಳನ್ನು ಪ್ರತಿಭಟಿಸಿ, ಸೂಕ್ತ ನ್ಯಾಯವನ್ನು ಪಡೆಯುತ್ತಿದ್ದರು. ಈಗ ರೈತನ ಮನೆ ಬಾಗಿಲುಗಳಲ್ಲೇ ವ್ಯಾಪಾರ ನಡೆಯುವುದರಿಂದ ರೈತರು ಏಕಾಂಗಿಗಳಾಗುತ್ತಾರೆ. ಸಾಲ ವಸೂಲಿ ನೆಪದಲ್ಲಿ, ಗೊಬ್ಬರ, ಔಷಧಿ, ಬೀಜ ಮುಂತಾದವುಗಳ ನೆಪದಲ್ಲಿ ರೈತರನ್ನು ಶೋಷಣೆ ಮಾಡುವ ವ್ಯವಸ್ಥೆಯೊಂದು ತಲೆ ಎತ್ತಿ ನಿಲ್ಲುತ್ತದೆ.  ರೈತ ಮತ್ತು ಖರೀದಿದಾರರನ ನಡುವೆ ವ್ಯಾಜ್ಯ ಉಂಟಾದರೆ  ಹೈಕೋರ್ಟ್ ಮೆಟ್ಟಿಲು ಹತ್ತಬೇಕಾಗಿದ್ದು, ಇದು ರೈತನ ಪಾಲಿಗೆ ದುಬಾರಿ ಆಗಲಿದೆ.

ಕೃಷಿ ಕ್ಷೇತ್ರವನ್ನು ಪ್ರವೇಶಿಸುವ ಅಂತರರಾಷ್ಟ್ರೀಯ ಮಾರುಕಟ್ಟೆಗಳು ಆರಂಭದಲ್ಲಿ ರೈತರನ್ನು ಆಕರ್ಷಿಸಲು ದುಪ್ಪಟ್ಟು ದರಗಳನ್ನು ಕೊಡುತ್ತವೆ. ಆ ಮೂಲಕ ತಮ್ಮ ಜಾಲಕ್ಕೆ ರೈತರನ್ನು ಬೀಳಿಸಿಕೊಳ್ಳುತ್ತವೆ. ಎಪಿಎಂಸಿಗಳು ಕ್ರಮೇಣ ಅವಸಾನಗೊಂಡ ದಿನ ಖಾಸಗಿ ಮಾರುಕಟ್ಟೆ ಮಾಫಿಯಾ ಸಂಘಟಿತವಾಗಿ ರೈತರನ್ನು ಸುಲಿಗೆ ಮಾಡಲು ಇಳಿಯುತ್ತದೆ. ಪರ್ಯಾಯ ಮಾರುಕಟ್ಟೆಯೇ ಇಲ್ಲದ ರೈತ ಕಂಪನಿಗಳ ನಿಗದಿ ಮಾಡಿದ ದರಕ್ಕೆ ಉತ್ಪನ್ನಗಳನ್ನು ಮಾರದೆ ದಾರಿಯಿರದಂತೆ ವ್ಯೂ ಹ ರಚಿಸಲಾಗಿರುತ್ತದೆ.  ರೈತನನ್ನು ಏಕಾಂಗಿಯಾಗಿಸಿ ಬೇಟೆಯಾಡುವ ಸುಲಿಗೆ ಕೋರರ ಮಾಫಿಯಾವೂ ದೇಶದಲ್ಲಿ ಕಾನೂನು ಮಾನ್ಯತೆಯಲ್ಲಿ ನೆಲೆಯೂರಲಿದೆ.

ದೇಶದಲ್ಲಿ ಸಂಪರ್ಕ ಸಂವಹನ ಕ್ಷೇತ್ರದಲ್ಲಿ(ಟೆಲಿಕಾಂ) ಅಂಬಾನಿ ಗ್ರೂಪ್ನ ಜಿಯೊ ನೆಟ್ವರ್ಕ್ ನೆಲೆಗೊಳಿಸುವಲ್ಲಿ ಅನುಸರಿಸಿದ ‘ಸಮ್ಮೋಹನ ಮೋಸವನ್ನೆ’ ಕೃಷಿ ಕ್ಷೇತ್ರದಲ್ಲೂ ಅಳವಡಿಸುವ ದೊಡ್ಡ ಹುನ್ನಾರವೇ ಕೃಷಿ ಮಸೂದೆಗಳ ಅನುಷ್ಠಾನದ ಆಂತರ್ಯದಲ್ಲಿ ಅಡಗಿದೆ. ಅಂಬಾನಿ ಗ್ರೂಪ್ನ ರಿಲಯನ್ಸ್, ಜಿಯೋ ಮಾರ್ಟ್ ಕಂಪನಿಗಳು ಸೇರಿದಂತೆ ಜಗತ್ತಿನ ಕುಖ್ಯಾತ ಏಳೆಂಟು ಕಾರ್ಪೋರೇಟ್ ಕಂಪನಿಗಳು ಕೃಷಿ ವಲಯಕ್ಕೆ ಲಗ್ಗೆ ಹಾಕಲು ಉತ್ಸುಹಕವಾಗಿರುವಾಗ ಅವುಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಲು ಮೋದಿ ಸರಕಾರ ದೇಶದ ರೈತನ ಬದುಕನ್ನೆ ಬಲಿಕೊಡಲು ಹೊರಟಿದೆ.

ಈಗ ‘ದೇಶವೆಂದರೆ ಬಂಡವಾಳಗಾರ, ಬಂಡವಾಳಗಾರನೆಂದರೆ ದೇಶ’ ಎಂಬ ಸಂದೇಶವನ್ನು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಸಾರಿದೆ. ‘ಆತ್ಮ ನಿರ್ಭರ ಭಾರತ’ ಎಂಬುದು ಒಂದು ಪೊಳ್ಳು ಸಂದೇಶವಷ್ಟೆ. ಅಂತಿಮವಾಗಿ ದೇಶವನ್ನು ವಸಾಹತುಕಾರರ, ಜಾಗತಿಕ ಬಂಡವಾಳಶಾಹಿಗಳ ಕೈಗೆ ಇಡಿ ಇಡಿಯಾಗಿ ಕೊಡಲು ದೇಶಭಕ್ತ ಸರಕಾರ ಉತ್ಸುಹಕವಾಗಿದೆ.

ದೇಶದಲ್ಲಿ ಕೈಗಾರಿಕೆ ಮತ್ತು ಕೃಷಿಯನ್ನು ಕಾರ್ಪೋರೇಟ್ ವಲಯದ ಏಕಸ್ವಾಮ್ಯ ಅಧೀನಕ್ಕೆ ಒಳಪಡಿಸುವ ವ್ಯವಸ್ಥಿತ ಸಂಚು ಇದಾಗಿದ್ದು,  ಕೊರೋನಾ ಲಾಕ್ಡೌನ್ ನೆಪದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ಅವಕಾಶವನ್ನು ಜಪ್ತಿ ಮಾಡಿ, ಜನಾಂದೋಲನಗಳ ಕತ್ತು ಹಿಸುಕಿದ ಎನ್ಡಿಎ ಸರಕಾರ ಕಾರ್ಮಿಕ ಕಾಯ್ದೆ, ರೈತ ಸಂಬಂಧಿತ ಕಾಯ್ದೆಗಳನ್ನು ಹೇರುವ ಮೂಲಕ ಬಂಡವಾಳಶಾಹಿ ಪರವಾದ ನೀತಿಯನ್ನು ಅನುಸರಿಸಿದೆ. ಇದು ಪ್ರಜಾಪ್ರಭುತ್ವದ ಮಾದರಿಯನ್ನು ಕೊಲ್ಲುವ ಆರಂಭಿಕ ಹಂತಗಳೇ ಆಗಿವೆ. ಪ್ರಸ್ತುತ ಮಸೂದೆಗಳು ಕಾನೂನು ಆಗಿ ಜಾರಿಗೆ ಬಂದ ಪಕ್ಷದಲ್ಲಿ ದೇಶದ ರೈತ ತನ್ನದೇ ಹೊಲದಲ್ಲಿ ಕೂಲಿ ಕಾರ್ಮಿಕನಾಗಿ ಇಲ್ಲವೇ ಭಿಕ್ಷುಕನಾಗಿಯೂ ಬೀದಿ ಬೀದಿಯಲ್ಲಿ ಕಾಣಸಿಗುತ್ತಾನೆ ಎನ್ನುವುದನ್ನು ಊಹಿಸಿಕೊಂಡರೆ ದೇಶದ ಪತನದ ದುಃಸ್ವಪ್ನ ಕಾಡುತ್ತದೆ. ದೇಶದ ಆಹಾರ ಭದ್ರತೆಯ ಬುಡವೇ ಕುಸಿದು ಬಡವರು ಹಸಿವಿನಿಂದ ನರಳುವಂತಹ ಘೋರ ಪರಿಣಾಮವೂ ಮುಂದಿನ ದಿನಗಳಲ್ಲಿ ಕಾದುಕುಳಿತಿದೆ.

ದೇಶದ ಆರ್ಥಿಕ ಅಭಿವೃದ್ದಿಯ ದೂರದೃಷ್ಟಿಯ ಸೌಧವೇ ಕುಸಿದು ನೆಲಕಚ್ಚಿರುವಾಗ ಈ ದೇಶದ ರೈತರ, ಕಾರ್ಮಿಕರ ಬದುಕನ್ನು ಇನ್ನಷ್ಟು ಬರ್ಬರವಾಗಿಸುವ ಕೆಲಸ ನಿರಾತಂಕವಾಗಿ ನಡೆದು ಹೋಗುತ್ತಿರುವುದು  ಇದೆಲ್ಲವನ್ನೂ ‘ದೇವರ ಆಟ’(Act of God) ಎಂದು ಕೈಚೆಲ್ಲುವ ಈ ದೇಶದ ಆರ್ಥಿಕ ಸಚಿವರು ದೇಶದ ಆರ್ಥಿಕ ಸ್ಥಿತಿಯನ್ನು ನಿಭಾಯಿಸಲಾಗದ ಅಸಮರ್ಥತೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಒಂಡೆಡೆ ಸ್ವದೇಶಿ ಸ್ವಾವಲಂಬನೆ ‘ಆತ್ಮನಿರ್ಭರ ಭಾರತ’ ಎಂಬ ಕರ್ಣಾಕರ್ಷಕ ಪದಗಳಿಂದ ಜನರನ್ನು ಸಮ್ಮೋಹನಗೊಳಿಸುತ್ತಿರುವ ಮೋದಿ ಸರಕಾರ ದೇಶವನ್ನು ಜಾಗತಿಕ ದಲ್ಲಾಳಿಗಳ, ಸಾಮ್ರಾಜ್ಯಶಾಹಿ ಬಂಡವಾಳಗಾರರ ವಸಹತುವನ್ನಾಗಿ ಮಾಡುವತ್ತ ಹೆಜ್ಜೆ ಹಾಕಿದೆ. ಜನರಿಗೆ ಇದೊಂದು ‘ಸಿಹಿ ಮೆತ್ತಿದ ವಿಷಗುಳಿಗೆ’(sweet coated poison pills) ಎಂದು ಅರಿವಾಗುವುದರೊಳಗೆ ಸಾವು ಸಂಭವಿಸಿರುತ್ತದೆ. ಹಾಗೊಮ್ಮೆ ಗೊತ್ತಾದರೂ ಧರ್ಮ, ರಾಷ್ಟ್ರೀಯತೆಯ ಹೆಸರಿನಲ್ಲಿ ಸುಳ್ಳು-ಪೊಳ್ಳುಗಳಿಂದ ಜನರನ್ನು ದಿಕ್ಕು ತಪ್ಪಿಸುವ ಕಲೆ ಕರಗತವಾಗಿಯೇ ಇದೆ. ‘ರೈತರೆಂದರೆ ಭಾರತ; ಭಾರತ ಎಂದರೆ ರೈತ…’, ‘ರೈತರಿಗೆ ಸಾಲ ಬೇಡ; ವೈಜ್ಞಾನಿಕ ಬೆಲೆ ಬೇಕು’ ಎಂಬ ರೈತ ಚಳವಳಿಯ ಗಡಚಿಕ್ಕುವ ಘೋಷವಾಕ್ಯಗಳ ಸೊಲ್ಲಡಗಿಸುವಲ್ಲಿ ಕೊನೆಗೂ ಈ ದೇಶದ ಪ್ರಭುತ್ವ ನಿರ್ದಯಿಯಾಗಿ ವರ್ತಿಸುತ್ತಿದೆ. ಈಗ ‘ದೇಶವೆಂದರೆ ಬಂಡವಾಳಗಾರ, ಬಂಡವಾಳಗಾರನೆಂದರೆ ದೇಶ’ ಎಂಬ ಸಂದೇಶವನ್ನು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಸಾರಿದೆ. ‘ಆತ್ಮ ನಿರ್ಭರ ಭಾರತ’ ಎಂಬುದು ಒಂದು ಪೊಳ್ಳು ಸಂದೇಶವಷ್ಟೆ. ಅಂತಿಮವಾಗಿ ದೇಶವನ್ನು ವಸಾಹತುಕಾರರ, ಜಾಗತಿಕ ಬಂಡವಾಳಶಾಹಿಗಳ ಕೈಗೆ ಇಡಿ ಇಡಿಯಾಗಿ ಕೊಡಲು ದೇಶಭಕ್ತ ಸರಕಾರ ಉತ್ಸುಹಕವಾಗಿದೆ.

ರೈತರನ್ನು ಸುಲಿಗೆ ಮಾಡುತ್ತಿರುವ ಕಂಪನಿ, ದಲ್ಲಾಳಿಗಳನ್ನು ಮಟ್ಟ ಹಾಕುವಲ್ಲಾಗಲಿ ಕಾನೂನು ರೂಪಿಸಿ ರೈತರ ಬದುಕಿಗೆ ಆಸರೆ ಆಗಬೇಕಾದ ಸರಕಾರ ಇಂತಹ ಹೊಣೆಗಾರಿಕೆಯನ್ನು ಪ್ರದರ್ಶಿಸದೆ ರೈತನನ್ನು ಸಾಲಗಾರರನ್ನಾಗಿಸಿ, ಬಂಡವಾಳಶಾಹಿಗಳ ಜೀತಕ್ಕೆ ದೂಡುವ ಅದರಲ್ಲೆ ಆತ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯವಸ್ಥೆಯೊಂದು ಕಟ್ಟಿಕೊಟ್ಟಿರುವುದನ್ನು ಕಾಣುತ್ತಿದ್ದೇವೆ.



Join Whatsapp