ಬೇಹುಗಾರಿಕೆಗೆ ಭಯಪಡದೆ ಸಿಎಎ ವಿರುದ್ಧ ಹೋರಾಡಲು ಎ.ಎ.ಎಸ್.ಯು ಕರೆ

Prasthutha|

ಗುವಾಹಟಿ, ಜುಲೈ 23: ಪೆಗಾಸೆಸ್ ಸ್ಪೈವೇರ್ ಫೋನ್ ಕದ್ದಾಲಿಕೆಯಿಂದಾಗಿ ನಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟ ಮುಂದುವರಿಯಲಿದೆಯೆಂದು ವಿದ್ಯಾರ್ಥಿ ಸಂಘಟನೆ, ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್ ನ ಮುಖ್ಯ ಸಲಹೆಗಾರ ಸಮುಜ್ಜಲ್ ಕುಮಾರ್ ಭಟ್ಟಾಚಾರ್ಯ ಗುರುವಾರ ಸ್ಪಷ್ಟಪಡಿಸಿದ್ದಾರೆ.

- Advertisement -

ಇತ್ತೀಚೆಗೆ ಪೆಗಾಸೆಸ್ ಬೇಹುಗಾರಿಕಾ ಹಗರಣದ ಮೂಲಕ ಅಸ್ಸಾಮಿನ ಇಬ್ಬರು ಪ್ರಮುಖ ವ್ಯಕ್ತಿಗಳು ಸೇರಿದಂತೆ ವಿಶ್ವದಾದ್ಯಂತ 50,000 ಮಂದಿಯ ಫೋನ್ ಕದ್ದಾಲಿಕೆ ನಡೆಸಿದೆಯೆಂಬ ವರದಿಯ ಹಿನ್ನೆಲೆಯಲ್ಲಿ ಸಮುಜ್ಜಲ್ ಕುಮಾರ್ ಭಟ್ಟಾಚಾರ್ಯ ಈ ಹೇಳಿಕೆ ನೀಡಿದ್ದಾರೆ. ಭಟ್ಟಾಚಾರ್ಯ ಮತ್ತು ಉಲ್ಫಾದ ಪ್ರಧಾನ ಕಾರ್ಯದರ್ಶಿ ಅನೂಪ್ ಚೆಟಿಯಾ ಅವರ ಬೇಹುಗಾರಿಕೆ ನಡೆಸಲಾಗಿದೆ ಎಂದು ವರದಿಯಾಗಿದೆ.


ಭಾರತೀಯ ನಾಗರೀಕರನ್ನು ಫೋನ್ ಕಣ್ಗಾವಲಿನ ಮೂಲಕ ಗುರಿಪಡಿಸುವ ಯೋಜನೆಯ ಕುರಿತು ಆಶ್ಚರ್ಯ ಮತ್ತು ಅಘಾತ ವ್ಯಕ್ತಪಡಿಸಿರುವ ಭಟ್ಟಾಚಾರ್ಯ, ಸರ್ಕಾರದ ಈ ನಡೆ ರಾಷ್ಟ್ರವಿರೋಧಿಯೆಂದು ಬಣ್ಣಿಸಿದ್ದಾರೆ. ಫೋನ್ ಕದ್ದಾಲಿಕೆಯ ಮೂಲಕ ನಮ್ಮನ್ನು ಭಯಪಡಿಸಬಹುದೆಂದು ಸರ್ಕಾರ ಭಾವಿಸಿದ್ದರೆ ಅದು ಮೂರ್ಖತನ. ನಮ್ಮ ಹಕ್ಕುಗಳಿಗಾಗಿ ಹೋರಾಡುವ ಉತ್ಸಾಹವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮತ್ತು ಈಶಾನ್ಯ ಜನರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಹಿಂಸಾತ್ಮಕ ಹೋರಾಟವನ್ನು ಮುಂದುವರಿಸುತ್ತೇವೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

- Advertisement -

ಅಸ್ಸಾಮ್ ರಾಜ್ಯಕ್ಕೆ ಅಕ್ರಮ ವಿದೇಶಿ ವಲಸಿಗರ ಒಳಪ್ರವೇಶವು ಅಸ್ಸಾಮ್ ಮತ್ತು ಈಶಾನ್ಯ ಪ್ರದೇಶದ ಸ್ಥಳೀಯ ಜನರ ಅಸ್ಮಿತೆಗೆ ಅಪಾಯಕಾರಿಯಾಗಿದೆ. ಅಸ್ಸಾಮಿನ ಪ್ರಮುಖ ವಿಷಯ ತುಂಬಾ ಸ್ಪಷ್ಟವಾಗಿದೆ. ಅಕ್ರಮ ವಲಸಿಗರನ್ನು ಗುರುತಿಸಲು ಮತ್ತು ಗಡೀಪಾರು ಮಾಡುವಂತೆ ಒತ್ತಾಯಿಸಿ 1979 ರಲ್ಲಿ ಎ.ಎ.ಎಸ್.ಯು ವತಿಯಿಂದ ಆಂದೋಲನವನ್ನು ಪ್ರಾರಂಭಿಸಲಾಯಿತು. ಸತತ ಆರು ವರ್ಷಗಳ ಪ್ರಯತ್ನದ ಫಲವಾಗಿ ಆಗಸ್ಟ್ 15 1985 ರಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಮ್ಮುಖದಲ್ಲಿ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ ಅದನ್ನು ಜಾರಿಗೆ ತರಲಾಗಿಲ್ಲ ಮತ್ತು ಪರಿಸ್ಥಿತಿ ಹೆಚ್ಚು ಗಂಭೀರವಾಯಿತು. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಹೇರುವುದರೊಂದಿಗೆ ಈಶಾನ್ಯವು ಕೊಳಚೆ ಮೈದಾನವಾಗುತ್ತಿದೆ ಎಂದು ಭಟ್ಟಾಚಾರ್ಯ ಟೀಕಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈಶಾನ್ಯ ರಾಜ್ಯಾದ್ಯಂತ ಸಿ.ಎ.ಎ ವಿರೋಧಿ ಚಳುವಳಿಯು ಪ್ರಬಲವಾಗುತ್ತಿದೆ ಮತ್ತು ಅಹಿಂಸಾತ್ಮಕವಾಗಿ ಮುಂದುವರಿಯಲಿದೆ. ಡಿಸೆಂಬರ್ 31, 2014 ಕ್ಕಿಂತ ಮೊದಲು ಐದು ವರ್ಷಗಳ ಕಾಲ ಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದ ಮೂಲದ ಹಿಂದುಗಳು, ಜೈನರು, ಕ್ರಿಶ್ಚಿಯನ್,ಸಿಖ್ಖರು, ಬೌದ್ಧ ಮತ್ತು ಪಾರ್ಸಿ ಪ್ರಜೆಗಳಿಗೆ ಸಿ.ಎ.ಎ ಮೂಲಕ ಭಾರತೀಯ ಪೌರತ್ವ ನೀಡಲು ಯೋಜನೆ ಹಾಕಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಭಟ್ಟಾಚಾರ್ಯ , ಅಸ್ಸಾಮಿನ ಒಪ್ಪಂದದ 6 ನೇ ಷರತ್ತಿನನ್ವಯ ಮೂಲನಿವಾಸಿಗಳಿಗೆ ಸಾಂವಿಧಾನಿಕ ಸುರಕ್ಷತೆಯನ್ನು ಖಾತರಿಪಡಿಸಬೇಕಾಗಿದೆ.

ಇಸ್ರೇಲ್ ಮೂಲದ ಸಂಸ್ಥೆ ಭಾರತದಲ್ಲಿ ಕಣ್ಗಾವಲು ನಡೆಸಲು ಅನುಮತಿ ನೀಡಲಾಗಿರುವ ಕುರಿತು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗ ಪಡಿಸುವಂತೆ ಎ.ಎ.ಎಸ್.ಯು ನಾಯಕ ಆಗ್ರಹಿಸಿದ್ದಾರೆ. ಮಾತ್ರವಲ್ಲದೇ ಉಲ್ಫಾ ನಾಯಕ ಚೆಟಿಯಾ ರವರ ಮೊಬೈಲ್ ಫೋನ್ ಕಣ್ಗಾವಲಿನಲ್ಲಿರುವ ಆತಂಕ ವ್ಯಕ್ತಪಡಿಸಿದ್ದಾರೆ. ಭಟ್ಟಾಚಾರ್ಯರಂತೆ ಚೆಟಿಯಾ ಕೂಡ ಅಸ್ಸಾಮಿನ ಸಿ.ಎ.ಎ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

Join Whatsapp