ಬೆಂಗಳೂರು, ಜುಲೈ 22: ಫೆಗಾಸಸ್ ಕಣ್ಗಾವಲು ತಂತ್ರಾಂಶದ ಮೂಲಕ ಭಾರತದ ಹಲವು ಗಣ್ಯರನ್ನು ಗೂಢಚರ್ಯೆ ಮಾಡಲಾಗಿದೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಟೆಲಿಫೋನ್ ಹ್ಯಾಕ್ ನಡೆಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಭವನಕ್ಕೆ ಮುತ್ತಿಗೆಗೆ ಯತ್ನಿಸಿ ಮೆರವಣಿಗೆ ನಡೆಸಿದ ವಿಧಾನಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೃಷ್ಣಭೈರೇ ಗೌಡ ಮುಂತಾದ ಕಾಂಗ್ರೆಸ್ ನಾಯಕರನ್ನು ರಾಜಭವನದ ದಾರಿ ಮಧ್ಯೆಯೇ ಬಂಧಿಸಲಾಯಿತು.
ಕೇಂದ್ರ ಸರಕಾರವು ಇಸ್ರೇಲ್ ಗೂಢಚರ್ಯೆ ಬಳಸಿ ಪ್ರಮುಖರನ್ನು ಗುರಿಯಾಗಿಸಿದೆ ಎಂದು ಆರೋಪಿಸಿ ರಾಜಭವನಕ್ಕೆ ಕೆಪಿಸಿಸಿ ವತಿಯಿಂದ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಹೊರಟ ನೂರಾರು ಸಂಖ್ಯೆಯಲ್ಲಿದ್ದ ನಾಯಕರು ಮತ್ತು ಕಾರ್ಯಕರ್ತರನ್ನು ಮಾರ್ಗ ಮಧ್ಯೆ ತಡೆದ ಪೊಲೀಸರು ಬಂಧಿಸಿದರು.
ಅದಕ್ಕೂ ಮೊದಲು ವಿಧಾನಸೌಧದದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಎದುರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು “ಇದು ದೇಶದ ಬಹುದೊಡ್ಡ ಅನೈತಿಕ ಗೂಢಚರ್ಯೆ” “ ಈ ಹಗರಣವು,ಅನೈತಿಕತೆಯ ಪರಮಾವಧಿ”, “ಅಮಿತ್ ಶಾ ಮತ್ತು ಮೋದಿ ರಾಜೀನಾಮೆ ಕೊಡಬೇಕು’ ಮುಂತಾಗಿ ಘೋಷಣೆ ಕೂಗಿದರು.
ಮುಖಂಡರಾದ ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶ್ ಕುಮಾರ್, ಶಿವಾನಂದ ಪಾಟೀಲ್, ಶಿವಶಂಕರರೆಡ್ಡಿ, ಪ್ರಿಯಾಂಕ್ ಖರ್ಗೆ, ಸಲೀಂ ಅಹಮದ್, ಅಜಯ್ ಸಿಂಗ್, ನಾರಾಯಣಸ್ವಾಮಿ, ಎಸ್. ರವಿ ಮತ್ತಿತರರು ಭಾಗವಹಿಸಿದ್ದರು.