ಕೊಡಗು, ಜು 22: ಎರಡು ಕೆ.ಜಿ. ಮಾಂಸವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ರಿಕ್ಷಾ ಚಾಲಕನೊಬ್ಬರ ಮೇಲೆ ಸಂಘಪರಿವಾರದ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಗರಗಂದೂರು ಎಂಬಲ್ಲಿ ನಡೆದಿದೆ.
ಆಟೊ ಚಾಲಕ ರಶೀದ್ ಹಲ್ಲೆಗೊಳಗಾದವರು. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸುನಿಲ್, ಮಾದಪುರ, ಮನು ಮಾದಾಪುರ, 3-ಮಂಜು ಮಾದಾಪುರ, ವಿನು ಮಾದಾಪುರ, 5-ವಿನು ಡಿ ಮಾದಾಪುರ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ರಶೀದ್ ಅವರು ಹುಣಸೂರಿನಲ್ಲಿರುವ ತನ್ನ ಅಕ್ಕನ ಮನೆಗೆ ಹೋಗಿ ಬರುವಾಗ ಎರಡು ಕೆ.ಜಿ.ಮಾಂಸವನ್ನು ಬಸ್ಸಿನಲ್ಲಿ ತಂದಿದ್ದಾರೆ. ಸುಂಟಿಕೊಪ್ಪದಲ್ಲಿ ನಿಲ್ಲಿಸಿದ್ದ ತನ್ನ ಆಟೋದಲ್ಲಿ ಮನೆಗೆ ಹೋಗುವಾಗ ಗರಗಂದೂರು ಗ್ರಾಮದ ದೇವಮ್ಮ ಎಂಬವರ ಮನೆ ಸಮೀಪ ತಲುಪಿದಾಗ ಜಂಬೂರು ನಿವಾಸಿ ಸುನೀಲ್, ಮುವತ್ತೊಕ್ಲಿನ ನಿವಾಸಿಗಳಾದ ಮನು, ವಿನು, ಮಂಜು ಮತ್ತಿತರರು ಅಕ್ರಮವಾಗಿ ರಿಕ್ಷಾವನ್ನು ಅಡ್ಡಗಟ್ಟಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಪ್ರಾಫ್, ರಫೀಕ್ ಮತ್ತಿತರರು ಜಗಳ ಬಿಡಿಸಿದ್ದು, ಈ ವೇಳೆ ಸುನೀಲ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ ಅವರೆಲ್ಲರೂ ಮಾದಾಪುರ ಕಡೆಗೆ ಪರಾರಿಯಾಗಿದ್ದಾರೆ. ಬಳಿಕ ರಶೀದ್ ಅವರು ಸುಂಟಿಕೊಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸೂಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ
ಎಸ್ ಡಿಪಿಐ ಖಂಡನೆ:
ಗೋ ಮಾಂಸ ಸಾಗಾಟದ ನೆಪದಲ್ಲಿ ಮುಸ್ಲಿಂ ಯುವಕನಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೊಲೀಸ್ ಇಲಾಖೆ ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಮುಂದಾಗುವ ಎಲ್ಲಾ ಅನಾಹುತಗಳಿಗೆ ಪೊಲೀಸ್ ಇಲಾಖೆಯೇ ನೇರ ಕಾರಣವಾಗಲಿದೆ ಎಂದು ಕೊಡಗು ಜಿಲ್ಲಾ SDPI ಎಚ್ಚರಿಸಿದೆ.
ದೇಶಾದ್ಯಂತ ಮುಸ್ಲಿಂ ಬಾಂಧವರು ತ್ಯಾಗ ಮತ್ತು ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುತ್ತಾ ಬಂದಿರುತ್ತಾರೆ. ಆಡು ಮತ್ತು ದನ ಹಾಗೂ ಇನ್ನಿತರ ಪ್ರಾಣಿಗಳನ್ನು ಬಲಿಕೊಟ್ಟು ಅದರ ಮಾಂಸವನ್ನು ದಾನ ನೀಡುವಂತದ್ದು ಬಕ್ರೀದ್ ಹಬ್ಬದ ಭಾಗವಾಗಿದೆ ಮತ್ತು ಈ ಕರ್ಮಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ.
ಭಾರತ ದೇಶದ ಸಂವಿಂಧಾನವು ಪ್ರತಿಯೊಂದು ಸಮುದಾಯದ ಭಾವನೆಗೆ ತಕ್ಕರೀತಿಯಲ್ಲಿ ಹಬ್ಬವನ್ನು ಆಚರಿಸಲು ಸಮ್ಮತಿಸಿ ಧಾರ್ಮಿಕ ಹಕ್ಕನ್ನು ನೀಡಿದೆಯಾದರೂ ಇಲ್ಲಿನ ಸಂಘಪರಿವಾರದ ಗೂಂಡಾಗಳು ಸ್ವಯಂ ದೇಶಭಕ್ತರಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನ ಪಡುವುದನ್ನು ಒಪ್ಪಲು ಸಾಧ್ಯವಿಲ್ಲ. ಇವರಿಗೆ ತಾಕತ್ತಿದ್ದರೆ ಮೊದಲು ಮೋದಿ ನೇತೃತ್ವದಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿರುವ ಬೀಫ್ ಮಾಂಸವನ್ನು ನಿಲ್ಲಿಸಲು ಪ್ರಯತ್ನಿಸಲಿ.
ಅದಲ್ಲದೆ ಈಗಾಗಲೇ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೋ ಸಂರಕ್ಷಣಾ ಕಾಯ್ದೆ ಇನ್ನು ಕೂಡ ಹೈಕೋರ್ಟ್ ನಲ್ಲಿ ಇತ್ಯರ್ಥವಾಗದೆ ಉಳಿದುಕೊಂಡಿರುವ ಕಾನೂನು ಆಗಿರುತ್ತದೆ. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದರಿಂದಲೇ ಸಂಘಪರಿವಾರದ ಗೂಂಡಾಗಳಿಂದ ಇಂತಹ ಘಟನೆಗಳು ಪುನರಾವರ್ತನೆ ಯಾಗಲು ಕಾರಣವಾಗಿದೆ.
ಕೊಡಗಿನಲ್ಲಿ ಈ ಹಿಂದೆಯೂ ಹಲವು ಕಡೆ ಗೋಮಾಂಸದ ನೆಪವೊಡ್ಡಿ ದೌರ್ಜನ್ಯ ಮತ್ತು ದರೋಡೆ ನಡೆಸಿದ ಇತಿಹಾಸವಿದೆ. ಗೋ ಮಾಂಸ ಸಾಗಾಟಗಾರರ ವಿರುದ್ಧ ಅಮಾನುಷವಾಗಿ ಹಲ್ಲೆ ನಡೆಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಸಾರ್ವಜನಿಕರು ತಿರುಗಿ ಬೀಳುವ ಮೊದಲು ಪೊಲೀಸ್ ಇಲಾಖೆ ಈ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಡಗು ಜಿಲ್ಲಾ ಅಧ್ಯಕ್ಷರಾದ ಮನ್ಸೂರ್ ಅಲಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.