ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿಯನ್ನೊಳಗೊಂಡಂತೆ 32 ಆರೋಪಿಗಳನ್ನು ದೋಷಮುಕ್ತಗೊಳಿಸಿ ನಿನ್ನೆ ತೀರ್ಪು ಹೊರಬರುವುದರೊಂದಿಗೆ 28 ವರ್ಷ ಹಳೆಯ ಬಾಬ್ರಿ ಮಸ್ಜಿದ್ ಪ್ರಕರಣ ಅಂತ್ಯಗೊಂಡಿದೆ. ದೇಶದಾದ್ಯಂತ ನ್ಯಾಯ ಪ್ರಿಯ ಜನರು ತೀರ್ಪನ್ನು ರಾಜಕೀಯ ತೀರ್ಪು ಎಂಬುದಾಗಿ ಟೀಕಿಸುತ್ತಿದ್ದಾರೆ.
ತೀರ್ಪಿನ ಭಾಷೆಯೇ ಹಿಂದಿ ಆಗಿರುವುದು ಇನ್ನೊಂದು ಸಂಚಾಗಿದೆ. ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭಾಷೆ ಹಿಂದಿಯಲ್ಲ. ಬಾಬ್ರಿ ಮಸ್ಜಿದ್ ಧ್ವಂಸ ಪ್ರಕರಣವು ರಾಷ್ಟ್ರೀಯ ಮಹತ್ವ ಪಡೆದ ಪ್ರಕರಣವಾಗಿದೆ. ತೀರ್ಪು ಸಂತ್ರಸ್ತ ಸಮುದಾಯ ಮತ್ತು ಅವರ ಸಂಕಟದೊಂದಿಗೆ ನಿಲ್ಲುವ ಭಾರತೀಯ ನಾಗರಿಕರ ಭಾವನೆಯ ಒಂದು ಭಾಗವಾಗಿದೆ. ಆದರೆ ದೇಶದ ದೊಡ್ಡ ಜನ ವಿಭಾಗಕ್ಕೆ ತೀರ್ಪು ಎಟುಕಬಾರದೆಂಬ ಕಾರಣದಿಂದ ಹಿಂದಿಯಲ್ಲಿ ಪ್ರಕಟಿಸಲಾಗಿದೆ.
ಉದಾಹರಣೆಗೆ ತಮಿಳುನಾಡಿನಲ್ಲಿ ನ್ಯಾಯಾಲಯಗಳ ಕಲಾಪಗಳು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿ.ಜೆ.ಎಂ) ಮಟ್ಟದಲ್ಲಿ ಗರಿಷ್ಠ ತಮಿಳು ಮತ್ತು ಪ್ರಾಥಮಿಕ ಜಿಲ್ಲಾ ಮತ್ತು ಸೆಶನ್ ನ್ಯಾಯಾಧೀಶರ (ಪಿಡಿಜೆ) ಮಟ್ಟದಲ್ಲಿ ಗರಿಷ್ಠ ಇಂಗ್ಲಿಷ್ ನಲ್ಲಿ ನಡೆಯುತ್ತದೆ. ವಿಶೇಷವಾಗಿ ಸಿ.ಬಿ.ಐ, ಎನ್.ಡಿ.ಪಿ.ಎಸ್ ಮುಂತಾದ ವಿಶೇಷ ನ್ಯಾಯಾಲಯಗಳಲ್ಲಿ ಇಂಗ್ಲಿಷ್ ನಲ್ಲಿ ಮಾತ್ರವೇ ನಡೆಯುತ್ತದೆ.
ಕೇರಳಕ್ಕೆ ಬಂದರೆ ಮೊದಲ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಿಂದ ಹಿಡಿದು ಪಿಡಿಜೆ ತನಕ ಇಂಗ್ಲಿಷ್ ನಲ್ಲೇ ನಡೆಯುತ್ತದೆ. ಮಹಾರಾಷ್ಟ್ರದಲ್ಲಿ ಅರ್ಜಿ/ಮನವಿಗಳು ಮರಾಠಿ ಭಾಷೆಯಲ್ಲಿ ಸಲ್ಲಿಕೆಯಾದರೂ ಆದೇಶ ಮತ್ತು ತೀರ್ಪುಗಳು ಇಂಗ್ಲಿಷ್ ನಲ್ಲೇ ಪ್ರಕಟವಾಗುತ್ತದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲೂ ಪಿಡಿಜೆ ಹಂತದಲ್ಲಿ ಇಂಗ್ಲಿಷನ್ನೇ ಓದಲಾಗುತ್ತದೆ.
ಉತ್ತರ ಪ್ರದೇಶದ ಕೆಳ ನ್ಯಾಯಾಲಯಗಳ ಅಧಿಕೃತ ಭಾಷೆ ಹಿಂದಿ ಆಗಿದ್ದರೂ ಎ.ಡಿ.ಜೆ ಮಟ್ಟದ ಸಿಬಿಐ ವಿಶೇಷ ನ್ಯಾಯಾಲಯ ಈ ವಿಷಯದಲ್ಲಿ ಇಂಗ್ಲಿಷ್ ನಲ್ಲಿ ತೀರ್ಪು ನೀಡಬೇಕಿತ್ತು. ಯಾಕೆಂದರೆ ಇದು ರಾಷ್ಟ್ರೀಯ ಆಸಕ್ತಿಯ ವಿಷಯವಾಗಿತ್ತು.
ಸುಲಭ ಅರ್ಥದಲ್ಲಿ ಹೇಳುವುದಾದರೆ ಆರ್.ಟಿ.ಐ ಅನ್ನು ಇಲ್ಲಿ ಉಲ್ಲೇಖಿಸಬಹುದು. ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ)ಯನ್ನು ನಾವು ಚರ್ಚಿಸುವಾಗ ಅದು ಮಾತನಾಡುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ 19 (1) (ಎ) ವಿಧಿಯಡಿ ಬರುತ್ತದೆ. ಈ ಹಕ್ಕನ್ನು ಚಲಾಯಿಸುವುದಕ್ಕೆ ತಿಳಿಯುವ ಹಕ್ಕು ಪ್ರಮುಖವಾದದ್ದು. ಅದಕ್ಕಾಗಿ ಆರ್.ಟಿ.ಐಯನ್ನು ಕಾನೂನಿನ ಮೂಲಕ ಅನುಷ್ಟಾನಗೊಳಿಸಲಾಗಿದೆ.
ತೀರ್ಪನ್ನು ತಿಳಿಯುವ ಹಕ್ಕು ಇಂಗ್ಲಿಷ್ ಸಾಮಾನ್ಯ ಭಾಷೆಯಾಗಿರುವ ಎಲ್ಲಾ ಪ್ರದೇಶಗಳ ಜನರದ್ದಾಗಿತ್ತು. ಈಗ ಅವರು ತೀರ್ಪು ಇಂಗ್ಲಿಷ್ ಗೆ ಅನುವಾದವಾಗುವುದನ್ನು ಕಾಯುತ್ತಿದ್ದಾರೆ. ಇದು ಹಿಂದಿಯೇತರ ಭಾಷೆ ಮಾತನಾಡುವ ಜನರಿಗೆ ಸವಾಲಾಗಿದೆ. ಅಂತಾರಾಷ್ಟ್ರೀಯ ಸಮುದಾಯ, ಮಾಧ್ಯಮ ಮತ್ತು ಜಾಗತಿಕ ಮಟ್ಟದಲ್ಲಿ ನ್ಯಾಯವನ್ನು ಪೀತಿಸುವ ಜನರಿಗೆ ನಿಜವಾದ ತೀರ್ಪನ್ನು ಅಲಭ್ಯಗೊಳಿಸುವ ಸಂಚೂ ಇದರ ಹಿಂದಿದೆ.