ಚಂಡೀಗಢ : ಇತ್ತೀಚೆಗೆ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದನ್ನು ವಿರೋಧಿಸಿ ಹರಿಯಾಣ ಬಿಜೆಪಿ ಮುಖಂಡ ಶ್ಯಾಮ್ ಸಿಂಗ್ ರಾಣಾ ಪಕ್ಷವನ್ನು ತೊರೆದಿದ್ದಾರೆ. ಯಮುನಾನಗರ ಜಿಲ್ಲೆಯ ರಡೌರ್ ನ ಶಾಸಕರಾದ ಶ್ಯಾಮ್ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್ ಅವರಿಗೆ ಸಲ್ಲಿಸಿದ್ದಾರೆ.
ಎಂ.ಎಲ್ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರದಲ್ಲಿ ಮುಖ್ಯ ಸಂಸದೀಯ ಕಾರ್ಯದರ್ಶಿಯಾಗಿದ್ದ ರಾಣಾ, ರೈತರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ತೊರೆಯುತ್ತಿದ್ದೇನೆ ಎಂದರು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಾನು ರಾಜೀನಾಮೆ ನೀಡುತ್ತಿದ್ದೇನೆ. ರೈತರಿಗೆ ಬೆಂಬಲವಾಗಿ ನಾನು ಪಕ್ಷದಲ್ಲಿ ಹೊಂದಿರುವ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ಪಕ್ಷಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಧಂಕರ್ ಅವರಿಗೆ ಬರೆದ ಪತ್ರದಲ್ಲಿ ರಾಣಾ ಹೇಳಿದ್ದಾರೆ.
ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಣಾ, ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರು ಕಳವಳ ಹೊಂದಿದ್ದಾರೆ ಎಂದರು. ರಾಜ್ಯದ ಅನೇಕ ರೈತರು ಬೆಳೆಗಳನ್ನು ಸಂಗ್ರಹಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೂ ಈ ವಿಷಯದ ಬಗ್ಗೆ ಸರಕಾರ ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಬೇರೆ ಯಾವುದಾದರೂ ಪಕ್ಷಕ್ಕೆ ಸೇರುತ್ತೀರಾ ಎಂದು ಕೇಳಲಾದಾಗ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ತಮ್ಮ ಬೆಂಬಲಿಗರೊಂದಿಗೆ ಸಮಾಲೋಚಿಸುವುದಾಗಿ ರಾಣಾ ಹೇಳಿದರು. ಹರಿಯಾಣ ಬಿಜೆಪಿ ನಾಯಕರಾದ ಪರ್ಮಿಂದರ್ ಸಿಂಗ್ ಧುಲ್ ಮತ್ತು ರಾಂಪಾಲ್ ಮಜ್ರಾ ಇತ್ತೀಚೆಗೆ ಜಾರಿಗೆ ತಂದ ಕೇಂದ್ರದ ಕೃಷಿ ಸುಧಾರಣೆಗಳನ್ನು “ರೈತ ವಿರೋಧಿ ನಡೆ” ಎಂದು ಬಣ್ಣಿಸಿದ್ದರು