ಉಪ್ಪಿನಂಗಡಿ: ಆರ್ ಎಸ್ ಎಸ್ ಕಾರ್ಯಕರ್ತನೋರ್ವ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕೂರಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೊಕ್ಕಡ ನಿವಾಸಿ, ಆರ್ ಎಸ್ ಎಸ್ ಕಾರ್ಯಕರ್ತ ರುಕ್ಮಯ್ಯ ಎಂಬಾತ ಕಾರಿನಲ್ಲಿ ಬಂದು ಬಾಲಕಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಲು ಯತ್ನಿಸಿದ್ದಾನೆ. ಇದಕ್ಕೆ ಬಾಲಕಿ ಒಪ್ಪದಿದ್ದಾಗ ಬೆದರಿಸಿ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಹಿಂಸೆ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಬಾಲಕಿ ಜೋರಾಗಿ ಕಿರುಚಿದಾಗ ಜೀವ ಬೆದರಿಕೆ ಒಡ್ಡಿ ಮನೆಗೆ ಕರೆತಂದು ಬಿಟ್ಟಿದ್ದಾನೆ. ಈ ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧಿಸಿ ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಆರ್ ಎಸ್ ಎಸ್ ಹಾಗೂ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತ ಎಂದು ತಿಳಿದುಬಂದಿದೆ .
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು, ಆರೋಪಿ ಕೊಕ್ಕಡ ನಿವಾಸಿ ರುಕ್ಮಯ್ಯ ಮಡಿವಾಳನನ್ನು ಬಂಧಿಸಿದ್ದಾರೆ. ಈತ ಹಿಂದೂ ಸಂಘಟನೆಯೊಂದರ ಮುಖಂಡ ಎಂದು ತಿಳಿದುಬಂದಿದ್ದು , ಈ ಮೊದಲು ಕೂಡ ಇಂತಹ ಪ್ರಕರಣಗಳು ಈತನ ಮೇಲೆ ದಾಖಲಾಗಿತ್ತು . ಅಲ್ಪಸಂಖ್ಯಾತ ಯುವಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿಯೂ ಆತ ಆರೋಪಿಯಾಗಿದ್ದಾನೆ.